ಸಾರಾಂಶ
ಹೊಸಪೇಟೆ; ತುಂಗಭದ್ರಾ ಜಲಾಶಯದ ಒಳಹರಿವು ಏರಿಕೆಯಾಗಿದ್ದು, ಕೃಷಿ, ಕೈಗಾರಿಕೆ ವಲಯದಲ್ಲೂ ಆರ್ಥಿಕ ಚಟುವಟಿಕೆ ಗರಿಗೆದರಿದೆ.
ರಾಜ್ಯದ ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ಈ ಜಲಾಶಯ ನೀರು ಒದಗಿಸುತ್ತದೆ. ಜತೆಗೆ ಇಲ್ಲಿನ ಕೈಗಾರಿಕೆಗಳೂ ಜಲಾಶಯದ ನೀರನ್ನೇ ಅವಲಂಬಿಸಿವೆ.ಜಲಾಶಯದ ಒಡಲು ಭರ್ತಿಯಾಗುತ್ತಿರುವುದರಿಂದ ಕೃಷಿ, ಕೈಗಾರಿಕಾ ವಲಯದಲ್ಲೂ ಪ್ರತ್ಯಕ್ಷ, ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಕಳೆದ ವರ್ಷ ಜಲಾಶಯ ಭರ್ತಿಯಾಗದ್ದರಿಂದ ಕೃಷಿ ವಲಯದಲ್ಲಿ ಎರಡನೇ ಬೆಳೆಗೆ ನೀರು ದೊರೆಯದೇ ರೈತರು ಒಂದು ಬೆಳೆ ನಷ್ಟ ಅನುಭವಿಸಿದ್ದರು. ಇನ್ನು ಕೈಗಾರಿಕೆಗಳಿಗೂ ಸಮರ್ಪಕ ನೀರು ದೊರೆಯದ್ದರಿಂದ ಸರ್ಕಾರ ಹಾಗೂ ಕೈಗಾರಿಕೋದ್ಯಮಿಗಳ ನಡುವೆ ಜಟಾಪಟಿಗೂ ಕಾರಣವಾಗಿತ್ತು. ಆದರೆ, ಈಗ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಈಗಾಗಲೇ ಎಡದಂಡೆ ಕಾಲುವೆಗೆ ನೀರು ಹರಿಬಿಡಲಾಗಿದೆ. ಇನ್ನು ವಿಜಯನಗರ ಕಾಲದ ರಾಯ, ಬಸವಣ್ಣ ಕಾಲುವೆಗಳಿಗೂ ನೀರು ಒದಗಿಸಲಾಗುತ್ತಿದೆ. ಕಾರ್ಖಾನೆಗಳಿಗೂ ನೀರಿನ ಖಾತ್ರಿ ದೊರೆತಿದೆ.
ಜಲಾಶಯದ ನೀರಿನಿಂದ ಜಲಾನಯನ ಪ್ರದೇಶದಲ್ಲಿ ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆಯಲಾಗುತ್ತದೆ. ಹೊಸಪೇಟೆ, ಕಮಲಾಪುರ ಭಾಗದಲ್ಲಿ ಕಬ್ಬು, ಬಾಳೆ ಬೆಳೆಗಳನ್ನು ಬೆಳೆಸಲಾಗುತ್ತದೆ. ಜಲಾಶಯದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮಳೆ ಆಶ್ರಿತ ಪ್ರದೇಶದ ಬೋರ್ ವೆಲ್‌ಗಳಲ್ಲೂ ಅಂತರ್ಜಲ ಮಟ್ಟ ಏರಿಕೆಯಾಗಿದೆ.10 ವರ್ಷಗಳಲ್ಲೇ ಹೆಚ್ಚು ಸಂಗ್ರಹ:
ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದರೆ ಜಲಾಶಯದಲ್ಲಿ ಈ ಬಾರಿಯೇ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾಶಯದ ಒಳಹರಿವು 1,08,790 ಕ್ಯುಸೆಕ್‌ನಷ್ಟಿದೆ. ಜಲಾಶಯದಲ್ಲಿ 55.972 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ 10 ವರ್ಷದ ಸರಾಸರಿ ನೋಡಿದರೆ 44.830 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ದಾಖಲೆ ಮೀರಿ ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಜುಲೈ 19ರಂದು ಜಲಾಶಯದಲ್ಲಿ 11.774 ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯದ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಈಗಾಗಲೇ 55.972 ಟಿಎಂಸಿ ನೀರು ಸಂಗ್ರಹವಾಗಿದೆ. ಇದೇ ಒಳಹರಿವು ಮುಂದುವರಿದರೆ ವಾರದಲ್ಲೇ ಜಲಾಶಯ ಭರ್ತಿಯಾಗಲಿದೆ.ಜಲಾಶಯದ ಒಟ್ಟು ನೀರಿನ ಮಟ್ಟ 1633.00 ಅಡಿ ಇದ್ದು, ಈಗಾಗಲೇ 1618.03 ಅಡಿಯಷ್ಟು ನೀರು ಸಂಗ್ರಹವಾಗಿದೆ. ಈ ಜಲಾಶಯ ಆಂಧ್ರಪ್ರದೇಶದ ಕರ್ನೂಲ, ಕಡಪ, ಅನಂತಪುರ ಮತ್ತು ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಗಳಿಗೂ ನೀರು ಒದಗಿಸುತ್ತದೆ. ತ್ರಿವಳಿ ರಾಜ್ಯಗಳ ರೈತರ, ಜನರ ಬದುಕಿಗೆ ಆಸರೆಯಾಗಿರುವ ಜಲಾಶಯದ ಒಳ ಹರಿವು ಉತ್ತಮ ಸ್ಥಿತಿಗೆ ತಲುಪಿರುವುದರಿಂದ ಈ ಬಾರಿ ಅನ್ನದಾತರ ಮೊಗದಲ್ಲೂ ಹರ್ಷ ಮೂಡಿದೆ.
ನಾಲ್ಕೇ ದಿನಕ್ಕೆ 20 ಟಿಎಂಸಿ ನೀರು ಸಂಗ್ರಹ:ತುಂಗಭದ್ರಾ ಜಲಾಶಯದ ಒಳಹರಿವು ಉತ್ತಮ ಸ್ಥಿತಿಯಲ್ಲಿರುವುದರಿಂದ ನಾಲ್ಕೇ ದಿನಕ್ಕೆ 20 ಟಿಎಂಸಿ ನೀರು ಜಲಾಶಯದ ಒಡಲಿನಲ್ಲಿ ಸಂಗ್ರಹವಾಗಿದೆ. ಜುಲೈ 16ರಂದು ಜಲಾಶಯದಲ್ಲಿ 35.473 ಟಿಎಂಸಿ ನೀರು ಸಂಗ್ರಹವಾಗಿತ್ತು. ಜು.17ರಂದು ಸಂಗ್ರಹದ ಪ್ರಮಾಣ 39.718 ಟಿಎಂಸಿಗೆ ಏರಿತ್ತು. ಜು.18ರಂದು 46.802 ಟಿಎಂಸಿ ನೀರು ಸಂಗ್ರಹವಾಗಿತ್ತು. ಜು.19ರಂದು 55.972 ಟಿಎಂಸಿ ನೀರು ಸಂಗ್ರಹವಾಗಿದೆ. ಇದೇ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದ್ದರೆ, ಜಲಾಶಯ ಶೀಘ್ರವೇ ಭರ್ತಿಯಾಗಲಿದೆ.
ತುಂಗಭದ್ರಾ ಜಲಾಶಯ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ರೈತರಿಗೆ ಒಳಿತಾಗಲಿದೆ. ಜಲಾಶಯ ಭರ್ತಿಯಾದರೆ ರೈತರಿಗೆ ಎರಡನೇ ಬೆಳೆ ಬೆಳೆಯಲು ಅನುಕೂಲ ಆಗಲಿದೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ.