ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ತಂತ್ರಜ್ಞಾನದ ಬೆಳವಣಿಗೆಯಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದರು.ಲಯನ್ಸ್ ಇಂಟರ್ ನ್ಯಾಷನಲ್ ಮಲ್ಟಿಪಲ್ ಡಿಸ್ಟ್ರಿಕ್ಟ್ 317, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಎಸ್. ವಿದ್ಯಾಶಂಕರ್ ಅಭಿಮಾನಿ ಬಳಗದಿಂದ ಇಲ್ಲಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಭಾನುವಾರ ನಡೆದ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರಿಗೆ ಅಭಿನಂದನೆ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
21ನೇ ಶತಮಾನ ಜ್ಞಾನಾಧಾರಿತ ಸಮಾಜವಾಗಿದ್ದು, ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಒಂದು ದೇಶ ಶಕ್ತಿಯುತ, ಸ್ವಾವಲಂಬಿ ಆಗಲು ಸಾಧ್ಯ. ಅದನ್ನು ಬದಲಿಸುವ ಪ್ರಯತ್ನಕ್ಕೆ ಯಾರೂ ಸಹಕರಿಸುವುದಿಲ್ಲ. ಉನ್ನತ ಶಿಕ್ಷಣ ಸಚಿವನಾಗಿ ನಾನು ಅಂಥ ಸಮಸ್ಯೆ ಎದುರಿಸಿದ್ದೇನೆ. ವಿದ್ಯಾಸಂಸ್ಥೆಗಳು ನಿಜವಾದ ಶಕ್ತಿ ಕೇಂದ್ರವಾಗಿದ್ದು, ಅವುಗಳಿಗೆ ಸ್ವಾಯತ್ತತೆ, ಸ್ವಾತಂತ್ರ್ಯ ನೀಡಬೇಕು ಎಂದರು.ಇಂದು ವಿಶ್ವವಿದ್ಯಾಲಯಗಳೂ ಅರ್ಥಿಕ ಹೊರೆಯಿಂದ ಬಿಳಿ ಆನೆಗಳಂತಾಗಿವೆ. ಎನ್.ಇ.ಪಿ ಅಳವಡಿಕೆಯಲ್ಲಿ ಎಸ್. ವಿದ್ಯಾಶಂಕರ್ ಉತ್ತಮ ಸಹಕಾರ ನೀಡಿದ್ದರು. ವಿಟಿಯುನಲ್ಲಿ ಅಂತರ ಶಿಸ್ತೀಯ ಹಾಗೂ ಬಹುಶಿಸ್ತೀಯ ವಿಷಯ ಕಲಿಕೆಯ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸುವಲ್ಲಿ ಅವರು ಶ್ರಮಿಸಿದ್ದು, ವಿಶ್ವವಿದ್ಯಾಲಯವನ್ನು ಮುನ್ನಡೆಸುವಲ್ಲಿ ಮಾದರಿಯಾಗಿದ್ದಾರೆ. ಇದು ಯುವ ಸಂಪನ್ಮೂಲವೃದ್ಧಿಗೆ ಮಹತ್ವದ ಕೊಡುಗೆ. ನರ್ಸರಿ ವಿಭಾಗದಲ್ಲಿಯೇ ಮಕ್ಕಳ ಕಲಿಕಾವೃದ್ಧಿಗೆ ಅಗತ್ಯ ಕ್ರಮಬೇಕು. ಇಂದು ರಾಜ್ಯ ಸರ್ಕಾರ ಪೈಲಟ್ಯೋಜನೆಯಲ್ಲಿ ಕೆಲ ಶಾಲೆಗಳಲ್ಲಿ ನರ್ಸರಿ ಆರಂಭಿಸಿದೆ. ಆದರೆ ಸಂಪನ್ಮೂಲ ನೀಡಿಲ್ಲ. ಹೀಗಾದರೆ ಜಡ್ಡು ಹಿಡಿದ ನಮ್ಮ ಶಿಕ್ಷಣ ವ್ಯವಸ್ಥೆ ಸರಿಯಾಗುವುದಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಸಂಸ್ಕಾರ, ಸಾಧನೆ ಮತ್ತು ದೈವತ್ವದ ಮಿಶ್ರಣ. ಎಲ್ಲಾ ವಿಷಯಗಳಲ್ಲೂ ಉನ್ನತ ಜ್ಞಾನ ಹೊಂದಿರುವ ಅವರು ರಾಜ್ಯದ ಬುದ್ಧಿವಂತ ಸ್ವಾಮೀಜಿ ಎಂದು ಶ್ಲಾಘಿಸಿದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮುಕ್ತ ವಿಶ್ವವಿದ್ಯಾಲಯದ ಅಭಿವೃದ್ಧಿ ಮೂಲಕ ಎಲ್ಲರಿಗೂ ಶಿಕ್ಷಣ ತಲುಪಿಸುವ ಕೆಲಸವನ್ನು ಎಸ್. ವಿದ್ಯಾಶಂಕರ್ ಮಾಡಿದ್ದಾರೆ. ಅಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ ಸ್ಥಾಪಿಸಿ ಜ್ಞಾನಾರ್ಜನೆಗೆ, ವಿವಿಧ ಕಾರ್ಯಕ್ರಮಕ್ಕೆ ವೇದಿಕೆ ಮಾಡಿರುವುದು ಸ್ಮರಣೀಯ. ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿಟಿಯು ಉತ್ತಮ ಸ್ಥಾನದಲ್ಲಿದ್ದು, ಅದರ ಚುಕ್ಕಾಣಿ ಹಿಡಿದು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಸ್ಮರಿಸಿದರು.
ಎಸ್. ವಿದ್ಯಾಶಂಕರ್ ಮತ್ತು ಪತ್ನಿ ಜ್ಯೋತಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ನೀಡಿ ಪುರಸ್ಕರಿಸಲಾಯಿತು.ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಲ್ಟಿಪಲ್ ಗ್ಯಾಟ್ ಸಂಯೋಜಕ ಕೆ. ದೇವೇಗೌಡ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್, ಲಯನ್ಸ್ ಡಿಸ್ಟ್ರಿಕ್ಟ್ ಚೇರ್ಮನ್ ಎನ್. ಕೃಷ್ಣೇಗೌಡ ಇದ್ದರು.