ಸಬ್ಸಿಡಿ ಯೋಜನೆ ದೇಶದ ಬೆಳವಣಿಗೆಗೆ ಮಾರಕ- ಜನರು ಸ್ವತಃ ದುಡಿದು ತಿನ್ನುವ ವ್ಯವಸ್ಥೆ ಜಾರಿ ಮಾಡಿ : ಕೋರ್ಟ್‌

| Published : Dec 16 2024, 12:46 AM IST / Updated: Dec 16 2024, 07:39 AM IST

Highcourt
ಸಬ್ಸಿಡಿ ಯೋಜನೆ ದೇಶದ ಬೆಳವಣಿಗೆಗೆ ಮಾರಕ- ಜನರು ಸ್ವತಃ ದುಡಿದು ತಿನ್ನುವ ವ್ಯವಸ್ಥೆ ಜಾರಿ ಮಾಡಿ : ಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಬ್ಸಿಡಿ ಯೋಜನೆ ದೇಶದ ಬೆಳವಣಿಗೆಗೆ ಮಾರಕವಾಗಲಿದೆ. ಜನರು ಸ್ವತಃ ದುಡಿದು ತಿನ್ನುವ ವ್ಯವಸ್ಥೆ ಜಾರಿ ಮಾಡದಿದ್ದರೆ ದೇಶ ಆರ್ಥಿಕವಾಗಿ ಸದೃಢವಾಗದು. ಸರ್ಕಾರವು ಬಡವರ ಏಳಿಗೆಗಾಗಿ ಸದುದ್ದೇಶದಿಂದ ಸಹಾಯಧನದ ಯೋಜನೆಗಳನ್ನು ಪರಿಚಯಿಸಿದೆ. ಆದರೆ ಅವುಗಳ ದುರ್ಬಳಕೆ ಪ್ರಮಾಣ ಹೆಚ್ಚಾಗಿದೆ ಎಂದ ಹೈಕೋರ್ಟ್‌ 

ವೆಂಕಟೇಶ್ ಕಲಿಪಿ

 ಬೆಂಗಳೂರು : ಸಬ್ಸಿಡಿ ಯೋಜನೆ ದೇಶದ ಬೆಳವಣಿಗೆಗೆ ಮಾರಕವಾಗಲಿದೆ. ಜನರು ಸ್ವತಃ ದುಡಿದು ತಿನ್ನುವ ವ್ಯವಸ್ಥೆ ಜಾರಿ ಮಾಡದಿದ್ದರೆ ದೇಶ ಆರ್ಥಿಕವಾಗಿ ಸದೃಢವಾಗದು. ಸರ್ಕಾರವು ಬಡವರ ಏಳಿಗೆಗಾಗಿ ಸದುದ್ದೇಶದಿಂದ ಸಹಾಯಧನದ ಯೋಜನೆಗಳನ್ನು ಪರಿಚಯಿಸಿದೆ. ಆದರೆ ಅವುಗಳ ದುರ್ಬಳಕೆ ಪ್ರಮಾಣ ಹೆಚ್ಚಾಗಿದೆ ಎಂದು ಹೈಕೋರ್ಟ್‌ ಮೌಖಿಕವಾಗಿ ಬೇಸರ ವ್ಯಕ್ತಪಡಿಸಿದೆ.

ಬಿಪಿಎಲ್‌ ಕಾರ್ಡುದಾರರಿಗೆ ವಿತರಿಸಬೇಕಿದ್ದ ನೀಲಿ ಸೀಮೆ ಎಣ್ಣೆಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ತೀರ್ಮಾನಿಸಿ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯ ಆದೇಶ ರದ್ದು ಕೋರಿ ಮೈಸೂರಿನ ಸಯ್ಯದ್‌ ಗೌಸ್‌ ಖಾನ್‌ (62) ಮತ್ತು ಅದಿಲ್‌ ಖಾನ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ವೇಳೆ ಆರೋಪಿಗಳ ಕೃತ್ಯದ ಬಗ್ಗೆ ತೀವ್ರವಾಗಿ ಆಕ್ಷೇಪಿಸಿದ ನ್ಯಾಯಮೂರ್ತಿ ವಿ‌.ಶ್ರೀಷಾನಂದ, ಬಡವರ ಅನುಕೂಲಕ್ಕೆ ಸರ್ಕಾರ ನೀಡುವ ಸಬ್ಸಿಡಿ ಯೋಜನೆಗಳು ದುರುಪಯೋಗವಾಗುತ್ತಿದೆ. ಇದರಿಂದ ಇಂದು ದೇಶ ಎಂತಹ ಸ್ಥಿತಿಗೆ ತಲುಪಿದೆ ಎಂದು ಯೋಚಿಸಿದರೆ ನೋವು ಉಂಟಾಗುತ್ತದೆ. ಸರ್ಕಾರವು ಬಡವರಿಗೆ ನೆರವಾಗಲು ಸಬ್ಸಿಡಿ ಯೋಜನೆ ರೂಪಿಸಿದರೆ ಸಾಲದು; ಅವುಗಳ ದುರುಪಯೋಗವನ್ನು ಸಹ ತಡೆಯಬೇಕು ಎಂದು ನುಡಿದರು.

ಅಲ್ಲದೆ, ಅರ್ಜಿದಾರರಿಗೆ ಕ್ಷಮಾದಾನ ನೀಡಬೇಕೆಂಬ ಅವರ ಪರ ವಕೀಲರ ಮನವಿಯನ್ನು ಮೊದಲಿಗೆ ಒಪ್ಪದ ನ್ಯಾಯಮೂರ್ತಿಗಳು, ಇದು ಸಾರ್ವಜನಿಕ ಅಗತ್ಯ ವಸ್ತುಗಳ ನಿಯಮಗಳಡಿ ದಾಖಲಾಗಿರುವ ಪ್ರಕರಣ. ಆರೋಪಿಗಳನ್ನು ಸುಮ್ಮನೆ ಬಿಡಲಾಗದು. ಒಂದು ವೇಳೆ ಸಮ್ಮನೆ ಬಿಟ್ಟರೆ ಈ ಆರೋಪಿಗಳು ಸೇರಿದಂತೆ ಇದೇ ಅಕ್ರಮದಲ್ಲಿ ಪಾಲ್ಗೊಳ್ಳುವ ಇತರರು ಪಾಠ ಕಲಿಯುವುದಿಲ್ಲ. ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದರು.

ಜೈಲು ಯಮ ಧರ್ಮರಾಯನ ಶಾಖೆ:

ನಂತರ ಅರ್ಜಿದಾರರಿಗೆ ವಯಸ್ಸಾಗಿರುವುದನ್ನು ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂಬ ನಿರ್ಧಾರವನ್ನು ಸಡಿಲಗೊಳಿಸಿದ ನ್ಯಾಯಮೂರ್ತಿಗಳು, ಈ ದೋಷಿಗಳಿಗೆ ವಯಸ್ಸಾಗಿದೆ. ನಮ್ಮ ಜೈಲಿನ ವ್ಯವಸ್ಥೆ ದೇವರಿಗೆ ಮಾತ್ರ ಇಷ್ಟವಾಗಬೇಕು. ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಹಾಗೂ ಜೈಲುಗಳು ಯಮಧರ್ಮರಾಯನ ಶಾಖೆಗಳಿದ್ದಂತೆ. ಈ ವಯಸ್ಸಿನಲ್ಲಿ ಆರೋಪಿಗಳನ್ನು ಜೈಲಿಗೆ ಕಳುಹಿಸಿ, ನರಳುವಂತೆ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಅದರ ಬದಲಾಗಿ ಜೈಲು ಶಿಕ್ಷೆಯನ್ನು ಮಾರ್ಪಡಿಸಿ, ದಂಡ ಮೊತ್ತವನ್ನು ಹೆಚ್ಚಿಸಿದರೆ ಸೂಕ್ತವಾಗುತ್ತದೆ ಎಂದು ತೀರ್ಮಾನಿಸಿದರು.

ಅಂತಿಮವಾಗಿ ಆರೋಪಿಗಳಿಗೆ ತಲಾ 25 ಸಾವಿರ ರು. ದಂಡ ವಿಧಿಸಿದ ನ್ಯಾಯಮೂರ್ತಿಗಳು, ದಂಡ ಮೊತ್ತವನ್ನು 2025ರ ಜ.10ರೊಳಗೆ ಪಾವತಿಸಬೇಕು. ತಪ್ಪಿದರೆ ಅಧೀನ‌ ನ್ಯಾಯಾಲಯ ವಿಧಿಸಿರುವಂತೆ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತಾಕೀತು ಮಾಡಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದರು.

ಪ್ರಕರಣವೇನು?:

2009ರ ಬೆಳಗ್ಗೆ 10.30ಕ್ಕೆ ಮೈಸೂರಿನ ಎಂಎಚ್‌ ರಸ್ತೆಯಲ್ಲಿರುವ ಮಿಷನ್‌ ಆಸ್ಪತ್ರೆಯ ತಡೆಗೋಡೆ ಹಿಂಭಾಗದಲ್ಲಿ ರೇಷನ್‌ ಕಾರ್ಡುದಾರರಿಗೆ ಸರ್ಕಾರವು ಸರಬರಾಜು ಮಾಡಿದ್ದ ಎರಡು ಬ್ಯಾರಲ್‌ ನೀಲಿ ಸೀಮೆ ಎಣ್ಣೆಯನ್ನು ಡೀಸೆಲ್‌ ಟ್ಯಾಂಕರ್‌ ಲಾರಿಗೆ ತುಂಬುವ ಮೂಲಕ ಖಾಸಗಿಯವರಿಗೆ ಅಕ್ರಮ ಮಾರಾಟ ಮಾಡಲು ಸಯ್ಯದ್‌ ಗೌಸ್‌ ಖಾನ್‌ ಮತ್ತು ಅದಿಲ್‌ ಖಾನ್‌ ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಮಂಡಿ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಹಾಗೆಯೇ, 70 ಹಾಗೂ 60 ಲೀಟರ್‌ ನೀಲಿ ಸೀಮೆ ಎಣ್ಣೆಯಿದ್ದ ಎರಡು ಬ್ಯಾರೆಲ್‌ಗಳನ್ನು ಜಪ್ತಿ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರು ಜಿಲ್ಲೆಯ 1ನೇ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಸೀಮೆ ಎಣ್ಣೆ (ಬಳಕೆಯ ಮೇಲಿನ ನಿರ್ಬಂಧ ಮತ್ತು ಮಾರಾಟ ಬೆಲೆಯ ಸ್ಥಿರೀಕರಣ) ಆದೇಶ-1993ರ ಸೆಕ್ಷನ್‌ 3 ಮತ್ತು 8, ಕರ್ನಾಟಕ ಅಗತ್ಯ ವಸ್ತುಗಳ ಆದೇಶ -1986ರ ಸೆಕ್ಷನ್‌ 3, ಸಾರ್ವಜನಿಕ ವಿತರಣಾ ವ್ಯವಸ್ಥೆ ಆದೇಶ-1992ರ ಸೆಕ್ಷನ್‌ 18(ಎ) ಅಡಿಯಲ್ಲಿ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ತಲಾ ಐದು ತಿಂಗಳ ಸಾಧಾರಣ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರು. ದಂಡ ವಿಧಿಸಿ 2012ರ ನ.16ರಂದು ಆದೇಶಿಸಿತ್ತು. ಈ ಆದೇಶವನ್ನು ಮೈಸೂರು ಜಿಲ್ಲೆಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಪುರಸ್ಕರಿಸಿದ್ದರಿಂದ ಆರೋಪಿಗಳು 2019ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು.