ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮೀಣ ಪ್ರದೇಶದಲ್ಲಿ ಮಹಿಯರು ಆರ್ಥಿಕ ಮತ್ತು ಉದ್ಯಮಗಳಲ್ಲಿ ಸಬಲೀಕರಣಗೊಳ್ಳಬೇಕಿದೆ ಎಂದು ಬಜ್ ವುಮನ್ ಸರ್ಕಾರೇತರ ಸಂಸ್ಥೆ ಸಿಇಒ ಉತ್ತರಾನಾರಾಯಣನ್ ಅಭಿಪ್ರಾಯಪಟ್ಟರು.ನಗರದಲ್ಲಿರುವ ಶ್ರೀಪಾಂಡುರಂಗ ಸಮುದಾಯ ಭವನದಲ್ಲಿ ಬಜ್ ವುಮನ್ ಸರ್ಕಾರೇತರ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಬಜ್ ಹಬ್ಬ-ಮಹಿಳಾ ಸಬಲೀಕರಣ ಮತ್ತು ಯಶಸ್ಸಿನ ಸಂಭ್ರಮಾಚರಣೆ ಸಮಾರಂಭ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
೨೧ನೇ ಶತನಮಾದಲ್ಲೂ ಹೆಣ್ಣು ಮಗು ಎಂದರೆ ತಾತ್ಸಾರ ಮನೋಭಾವ ಹೋಗಿಲ್ಲ. ಖರ್ಚು ಎಚ್ಚಾಯಿತು ಎನ್ನುವ ಹೊರೆಮನೋಭಾವ ಹೆಚ್ಚಾಗುತ್ತಿದೆ, ಇಂತಹ ಆರ್ಥಿಕ ಹೊರೆ ಮನೋಭಾವವನ್ನು ತೊಲಗಿಸಲು ಮಹಿಳೆಯರು ಸಶಕ್ತರಾಗಬೇಕು, ಸಬಲೀಕರಣಗೊಳ್ಳಬೇಕು ಎನ್ನುವುದು ಬಜ್ ವುಮನ್ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ನುಡಿದರು.ಕಳೆದ ೧೩ ವರ್ಷಗಳ ಹಿಂದೆ ಮಹಿಳಾ ಸಬಲೀಕರಣಕ್ಕಾಗಿ ಸಂಸ್ಥೆ ಆರಂಭಗೊಂಡಿತು. ೧೩ ಜಿಲ್ಲೆಗಳಲ್ಲಿ ೬ ಲಕ್ಷ ಮಹಿಳೆಯರಿಗೆ ಬೇರೆ ಬೇರೆ ಅವಕಾಶಗಳನ್ನು ತಲುಪಿಸಿ, ತರಬೇತಿ ನೀಡಿ, ಆರ್ಥಿಕ ಮತ್ತು ಉದ್ಯಮಗಳಲ್ಲಿ ಸಬಲೀಕರಣಗೊಳ್ಳುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮೊಂದಿಗೆ ೨೦೦ ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ೩ ಕೋಟಿ ಮಹಿಳೆಯರಿದ್ದಾರೆ, ಅದರಲ್ಲಿ ೧ ಕೋಟಿ ಮಹಿಳೆಯರಿಗೆ ನಮ್ಮ ಸಂಸ್ಥೆಯಿಂದ ಸಬಲೀಕರಣಕ್ಕೆ ಮಹತ್ವ ನೀಡುವ ಹಂಬಲವಿದೆ. ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಗುವುದು ಎಂದು ಮಾಹಿತಿ ನೀಡಿದರು.ವಿಶ್ವದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಶೇ.೨ರಷ್ಟು ಮಾತ್ರ ಹಣ ಲಭ್ಯವಾಗುತ್ತಿದೆ. ಸಂಘ-ಸಂಸ್ಥೆಗಳ ನೆರವಿನಿಂದ ಮಹಿಳೆಯರಲ್ಲಿ ಸ್ವಾವಲಂಬನೆ ಬದುಕು, ಅವಕಾಶ ಲಭಿಸುವುದು, ಆಸಕ್ತರಿಗೆ ತರಬೇತಿ ನೀಡಿ ಉದ್ಯಮಶೀಲರನ್ನಾಗಿಸುವುದು ಪ್ರಮುಖವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಕ್ರಮಾಧಿಕಾರಿ ಆಶಾ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸಿಗುವ ಸೌಲಭ್ಯ ಮತ್ತು ತರಬೇತಿಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಿ, ಆರ್ಥಿಕ ಸ್ವಾವಲಂಬನೆ ಮತ್ತು ಸ್ವ-ಉದ್ಯೋಗ- ಉದ್ಯಮಗಳ ಬಗ್ಗೆ ಅರಿವು, ಜ್ಞಾನ ಹೆಚ್ಚಿಸಿಕೊಂಡು ಸಬಲೀಕರಣಗೊಂಡು ಮತ್ತೊಬ್ಬರಿಗೆ ದಾರಿದೀಪವಾಗಿ ಎಂದು ಸಲಹೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆತ್ಮಹತ್ಯೆಯ ಆಲೋಚನೆಯತ್ತ ಹೆಚ್ಚು ವಾಲುತ್ತಿದ್ದಾರೆ, ಕೌಟುಂಬಿಕ ಸಮಸ್ಯೆ ಅಥವಾ ಹಣಕಾಸಿನ ವ್ಯವಹಾರಕ್ಕೆ ತಿಳಿಯುತ್ತಿಲ್ಲ, ದಿನೇ ದಿನೇ ಮಹಿಳೆಯರು ಆತ್ಮಹತ್ಯೆಯೇ ಪರಿಹಾರ ಎಂದುಕೊಂಡು ತಮ್ಮ ಮಕ್ಕಳನ್ನು ಸಾಯಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ ಶಶಿಕಲಾ, ವಕೀಲ ವಿಜಯ್‌ಕೊಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಲಿಂಗೇಶ್, ಬಜ್ ವುಮನ್ ಸಂಸ್ಥೆ ಮಂಡ್ಯ ವ್ಯವಸ್ಥಾಪಕ ಬಾಲಕೃಷ್ಣ ಮತ್ತು ತರಬೇತಿ ಮೇಲ್ವಿಚಾರಕ ಕಾರ್ಯಕಾರಿಣಿ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.