ಸಾರಾಂಶ
ಖುಷ್ಕಿ ಬೇಸಾಯದಲ್ಲಿ ಅತಿ ಕಡಿಮೆ ನೀರನ್ನು ಬೇಡುವ ಬೆಳೆಗಳಾದ ಮಾವು, ಸೀಬೆ, ಸಪೋಟಾ, ತೆಂಗು ಇವುಗಳನ್ನು ಬೆಳೆಯುವುದರಿಂದ ಬರಗಾಲದಲ್ಲೂ ಆರ್ಥಿಕ ಸಬಲತೆಯ ನ್ನು ಹೊಂದಲು ಸಹಕಾರಿಯಾಗಿದೆ
ದಾವಣಗೆರೆ: ಭೂಮಿಯ ಅಂತರ್ಜಲ ಕಡಿಮೆ ಇರುವ ಜಾಗದಲ್ಲಿ ಖುಷ್ಕಿ ತೋಟಗಾರಿಕೆ ವರದಾನವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
ಜಿಲ್ಲೆಯ ಜಗಳೂರು ತಾಲೂಕು ಕಲ್ಲೇದೇವರಪುರದಲ್ಲಿ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೆಂಗಳೂರಿನ ಐಸಿಎಆರ್-ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಆಶ್ರಯದಲ್ಲಿ ನಡೆದ ''''''''ಖುಷ್ಕಿ ತೋಟಗಾರಿಕೆ'''''''' ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಖುಷ್ಕಿ ಬೇಸಾಯದಲ್ಲಿ ಅತಿ ಕಡಿಮೆ ನೀರನ್ನು ಬೇಡುವ ಬೆಳೆಗಳಾದ ಮಾವು, ಸೀಬೆ, ಸಪೋಟಾ, ತೆಂಗು ಇವುಗಳನ್ನು ಬೆಳೆಯುವುದರಿಂದ ಬರಗಾಲದಲ್ಲೂ ಆರ್ಥಿಕ ಸಬಲತೆಯ ನ್ನು ಹೊಂದಲು ಸಹಕಾರಿಯಾಗಿದೆ ಎಂದರು.
ಪ್ರಸ್ತುತ ಜಗಳೂರಿನಲ್ಲಿ ಅಡಕೆ ಬೆಳೆಯ ವಿಸ್ತೀರ್ಣ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಬೋರ್‌ವೆಲ್ ಆಶಯದಲ್ಲಿ ತೋಟ ನಿರ್ವಹಣೆ ಕಷ್ಟ ಸಾಧ್ಯ. ಹಾಗಾಗಿ, ರೈತರು ಅಡಕೆ ಬೆಳೆಯೊಂದಕ್ಕೇ ಮಾರುಹೋಗದೇ ಇತರೆ ಹಣ್ಣಿನ ಬೆಳೆಗಳನ್ನು ಬೆಳೆಯುವತ್ತ ಮನಸ್ಸು ಮಾಡಬೇಕೆಂದರು.ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಟಿ.ಜಿ. ಅವಿನಾಶ್ ಮಾತನಾಡಿ, ಪ್ರಸ್ತುತ ಮೆಕ್ಕೆಜೋಳದಲ್ಲಿ ಮಳೆ ಕೊರತೆಯಿಂದ ಲದ್ಧಿಹುಳು ಬಾಧೆ ಅಲ್ಲಲ್ಲಿ ಕಂಡುಬಂದಿದೆ. ಹುಳುಬಾಧೆ ನಿರ್ವಹಣೆಗೆ ಇಮಾಮೆಕ್ಟಿನ್ ಬೆಂಜೋಯೇಟ್ 0.4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆಯ್ದ 20 ರೈತರಿಗೆ ಅರಸೀಕೆರೆ ಎತ್ತರದ ತೆಂಗಿನ ಸಸಿಗಳನ್ನು ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಿತರಿಸಲಾಯಿತು.