ಸಾರಾಂಶ
ಕೊಪ್ಪಳ:
ಮೀನು ಕೃಷಿ ಕೈಗೊಳ್ಳಲು ಮತ್ಸ್ಯ ಸಂಜೀವಿನಿ ಯೋಜನೆಯು ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಜಿಪಂ ಸಿಇಒ ವರ್ಣಿತ್ ನೇಗಿ ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಜಿಪಂ ಹಾಗೂ ಮೀನುಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮತ್ಸ್ಯಸಂಜೀವಿನಿ ಯೋಜನೆಯು ಕರ್ನಾಟಕದಲ್ಲಿ ಹೊಸ ಪ್ರಯೋಗವಾಗಿದ್ದು, ಈ ಯೋಜನೆಯಡಿ ಕೆಲ ಜಿಲ್ಲೆಯಲ್ಲಿ ಹೆಚ್ಚು ಸಮಯದ ವರೆಗೆ ನೀರಿರುವಂತಹ ಕೆರೆಗಳಲ್ಲಿ ಈಗಾಗಲೇ ಕೈಗೊಂಡಿರುವ ಮೀನು ಕೃಷಿಯು ಯಶಸ್ವಿಯಾಗಿದೆ. ಈ ಯೋಜನೆಯನ್ನು ಮೀನುಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಎನ್‌ಆರ್‌ಎಲ್‌ಎಂ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದ ಅವರು, ಜಿಲ್ಲೆಯಲ್ಲಿರುವ ಕೆರೆಗಳಲ್ಲಿ ಮಳೆಗಾಲದ ನಂತರವೂ 6 ತಿಂಗಳು ನೀರು ಸಂಗ್ರಹಿಸುವ 15 ಕೆರೆ ಗುರುತಿಸಿದ್ದು, ಅಂತಹ ಕೆರೆಗಳಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮೀನು ಕೃಷಿ ಕೈಗೊಳ್ಳಲು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಕೆರೆಗಳ ಗುತ್ತಿಗೆ ನೀಡಲು ಅವಕಾಶವಿದೆ. ಇದರಿಂದ ಗ್ರಾಮೀಣ ಭಾಗದಲ್ಲಿರುವ ಸ್ವ-ಸಹಾಯ ಸಂಘದ ಗುಂಪಿನ ಸದಸ್ಯರಿಗೆ ಆರ್ಥಿಕವಾಗಿ ಸಬಲೀಕರಣವಾಗಲಿದೆ ಎಂದರು.ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಕೆರೆಗಳಲ್ಲಿ ಮೀನು ಮರಿ ಬಿಟ್ಟು, ಅವುಗಳ ಪಾಲನೆ ಮತ್ತು ಮಾರಾಟ ಮಾಡಿ, ಯಾವ ರೀತಿ ಲಾಭಗಳಿಸಬೇಕೆಂಬ ಮಾಹಿತಿ ನೀಡಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೀನುಗಾರಿಕೆಗೆ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ, ಸಹಾಯಧನ ಮತ್ತು ಹಲವು ಸೌಲಭ್ಯಗಳಿದ್ದು, ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಇದರ ಜತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದಲೂ ನಿಮಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯನಗರ ಜಿಲ್ಲೆಯ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲೇಶ ನಾಯಕ, ಇಲಾಖೆ ಯೋಜನೆ ಹಾಗೂ ಸಾಲ ಸೌಲಭ್ಯ ಕುರಿತು ಮಾಹಿತಿ ನೀಡಿದರು.ಈ ವೇಳೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಕೊಪ್ಪಳ ಮೀನಿಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಪಾಟೀಲ್, ಗಂಗಾವತಿ ಆನಂದ ಪಾಟೀಲ್, ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಜಿಪಂನ ಓಂಬುಡ್ಸ್ ಮನ್ ವೀರಣ್ಣ ಕಮ್ತಾರ, ಎನ್‌ಆರ್‌ಎಲ್‌ಎಂ ಘಟಕದ ಅಂಬಣ್ಣ ಹಾಗೂ ಮೀನುಗಾರಿಕೆ ಇಲಾಖೆಯ ಇತರೆ ಅಧಿಕಾರಿ, ಸಿಬ್ಬಂದಿ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.