ಬಡವರ ಆರ್ಥಿಕ ಕಲ್ಯಾಣವೇ ಕಾಂಗ್ರೆಸ್ ಧ್ಯೇಯ: ರಾಜಶೇಖರ ಹಿಟ್ನಾಳ

| Published : Mar 30 2024, 12:53 AM IST

ಬಡವರ ಆರ್ಥಿಕ ಕಲ್ಯಾಣವೇ ಕಾಂಗ್ರೆಸ್ ಧ್ಯೇಯ: ರಾಜಶೇಖರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರ ಆರ್ಥಿಕ ಕಲ್ಯಾಣವೇ ಕಾಂಗ್ರೆಸ್ ಧ್ಯೇಯವಾಗಿದೆ. ಕಾಂಗ್ರೆಸ್ ಸದಾ ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರಾಷ್ಟ್ರಕ್ಕೆ ಕೊಡಮಾಡಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳ: ಬಡವರ ಆರ್ಥಿಕ ಕಲ್ಯಾಣವೇ ಕಾಂಗ್ರೆಸ್ ಧ್ಯೇಯವಾಗಿದೆ. ರಾಜ್ಯದ ಬಡವರಿಗೆ ನಿಯಮಿತವಾಗಿ ಆದಾಯ ಬರಬೇಕು ಎನ್ನುವ ಕಾರಣಕ್ಕಾಗಿಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಹೇಳಿದ್ದಾರೆ.

ಭಾಗ್ಯನಗರ ಪಟ್ಟಣದ ಬಾಲಾಜಿ ಪಂಕ್ಷನ್ ಹಾಲ್‌ನಲ್ಲಿ ನಡೆದ ಕೊಪ್ಪಳ ಲೋಕಸಭಾ ಚುನಾವಣೆ ಸಭೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸದಾ ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರಾಷ್ಟ್ರಕ್ಕೆ ಕೊಡಮಾಡಿದೆ. ಬ್ರಿಟಿಷರು ದೇಶವನ್ನು ಕೊಳ್ಳೆಹೊಡದ ಆನಂತರ ಭಾರತ ಬಡರಾಷ್ಟ್ರವಾಯಿತು. ಸ್ವಾತಂತ್ರ್ಯಾನಂತರ ದೇಶದ ಚುಕ್ಕಾಣಿ ಹಿಡಿದ ಪಂ. ಜವಾಹರಲಾಲ್‌ ನೆಹರು ಅವರು ದೇಶವನ್ನು ಸಂಪದ್ಭರಿತ ಮಾಡಲು ಎಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿದರು. ವಿಶ್ವದ ಭೂಪಟದಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ದೊರೆಯುವಂತೆ ಮಾಡಿದರು. ತದನಂತರ ಇಂದಿರಾ ಗಾಂಧಿ ಅವರು 20 ಅಂಶಗಳ ಕಾರ್ಯಕ್ರಮದಿಂದ ದೇಶದ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಭಾರತವನ್ನು ಅಭಿವೃದ್ಧಿ ರಾಷ್ಟ್ರಗಳ ಜತೆಗೆ ಪೈಪೋಟಿ ಮಾಡುವಂತೆ ಮಾಡಿದರು ಎಂದರು.

ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಮಾತನಾಡಿ, ಅತ್ಯಂತ ಕಡುಬಡ ರಾಷ್ಟ್ರವಾದ ಭಾರತದಲ್ಲಿ ಜನರು ಊಟಕ್ಕಾಗಿ ಪರಿತಪಿಸುವ ಪರಿಸ್ಥಿತಿ ಇತ್ತು. ದೇಶದಲ್ಲೆಲ್ಲ ಬಡತನ ತಾಂಡವ ಆಡುತ್ತಿತ್ತು. ಸದೃಢ ರಾಷ್ಟ್ರ ನಿರ್ಮಾಣವಾಗಲು ಕಾಂಗ್ರೆಸ್ ಕೊಡುಗೆ ಅಪಾರ ಎಂದು ಹೇಳಿದರು

ಗ್ಯಾರಂಟಿ ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಿಶೇಷ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಎಐಸಿಸಿ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್‍.ಬಿ. ನಾಗರಳ್ಳಿ, ಟಿ. ಜನಾರ್ದನ ಹುಲಗಿ, ಮುಖಂಡರಾದ ಜುಲ್ಲು ಖಾದರಿ, ಗೂಳಪ್ಪ ಹಲಗೇರಿ, ಭರಮಪ್ಪ ನಗರ, ಸ್ಥಾಯಿ ಸಮಿತಿ ಸದಸ್ಯ ಅಕ್ಬರಪಾಷಾ ಪಲ್ಟನ್, ವೆಂಕಟೇಶ ಕಂಪಸಾಗರ, ಕಾಟನ್ ಪಾಷಾ, ಯಮನಪ್ಪ ಕಬ್ಬೇರ, ಯಂಕಪ್ಪ ಹೊಸಳ್ಳಿ, ಕೃಷ್ಣ ಇಟ್ಟಂಗಿ, ಶ್ರೀನಿವಾಸ ಗುಪ್ತಾ, ಹೊನ್ನರಸಾಬ್‌, ಗಂಗಾಧರ ಕಬ್ಬೇರ, ಅಶೋಕ ಗೋರಂಟ್ಲಿ, ಮಂಜುನಾಥ ಗೊಂಡಬಾಳ, ಕಾವೇರಿ ರ್ಯಾಗಿ, ಸವಿತಾ ಗೋರಂಟ್ಲಿ ಯಶೋದಾ ಮರಡಿ, ಶಿಲ್ಪಾ ಚನ್ನಪ್ಪ ತಟ್ಟಿ ಇದ್ದರು.