ಸಾರಾಂಶ
ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಬಹದ್ದೂರ ಬಂಡಿಯಲ್ಲಿ ಚಾಲನೆ
ಕನ್ನಡಪ್ರಭ ವಾರ್ತೆ ಕೊಪ್ಪಳಜೀವ ಮಂಡಲದಲ್ಲಿರುವ ಎಲ್ಲ ಸಂಪತ್ತಿನ ಉಳಿವಿಗೆ ವೃಕ್ಷ ಸಹಕಾರಿಯಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ ಹೇಳಿದರು.
ತಾಲೂಕಿನ ಬಹದ್ದೂರಬಂಡಿ ಗ್ರಾಮದ ವ್ಯಾಪ್ತಿಯ ಪ್ರಧಾನಮಂತ್ರಿ ಕೇಂದ್ರಿಯ ವಿದ್ಯಾಲಯ ಆವರಣದಲ್ಲಿ ತಾಪಂ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ, ಭೂಮಿಯ ತಾಪ ಹೆಚ್ಚಳವಾಗುತ್ತದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿನ ಕೊರತೆ ಉಂಟಾಗುತ್ತದೆ. ಪ್ರತಿಯೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ಮರಗಳನ್ನು ನೆಟ್ಟು ಪೋಷಿಸಿದಲ್ಲಿ ಅರಣ್ಯ ಪ್ರಮಾಣ ಹೆಚ್ಚಳವಾಗುವ ಜತೆಗೆ ಕಾಲ ಕಾಲಕ್ಕೆ ಮಳೆಯಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು.ಭಾರತ ಮಾತೆಯಾದ ತಾಯಿಯ ಹೆಸರಿನಲ್ಲಿ ವೃಕ್ಷ ನೆಡುವುದರಿಂದ ಅಭಿಯಾನದ ಮೂಲ ಉದ್ದೇಶ ಈಡೇರಿದಂತಾಗುತ್ತದೆ ಎಂದು ಹೇಳಿದರು.
ಅಭಿಯಾನಕ್ಕೆ ಮೆರುಗು ತಂದ ವಿದ್ಯಾರ್ಥಿಗಳು:ಇದೇ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಅನುಷ್ಠಾನ ಮಾಡುತ್ತಿರುವ, ಸಂಘ-ಸಂಸ್ಥೆಗಳಲ್ಲಿ ಅರಣ್ಯ ಬೆಳೆಸುವ ಕಾಮಗಾರಿ ಪ್ರಯುಕ್ತ ೨೫ ಬೇವು ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಮೆರುಗು ತಂದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ಹುಸೇನ ಪೆಂಡಾರಿ ಮಾತನಾಡಿ, ಪರಿಸರ ಸಮೃದ್ಧ, ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿರುತ್ತದೆ. ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. ನಮ್ಮ ಪರಿಸರದ ಸಂರಕ್ಷಣೆಗಾಗಿ ನಾವೆಲ್ಲರೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು ಅವಶ್ಯವಿದೆ. ನಮ್ಮ ದೈನಂದಿನ ಜೀವನದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಕೆಲವೊಂದು ಬದಲಾವಣೆ ಅನುಸರಿಸಿದಲ್ಲಿ ಭೂಮಿಯ ಉಳಿವಿಗೆ ಸಹಾಯಕವಾಗುತ್ತದೆ ಎಂದರು.ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಸಾಮಾಜಿಕ ವಲಯ ಅರಣ್ಯಧಿಕಾರಿ ಗುರುನಗೌಡ ಪಾಟೀಲ್, ಉಪ ವಲಯ ಅರಣ್ಯಧಿಕಾರಿ ಉಮೇಶ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಬಹದ್ದೂರಬಂಡಿ ಗ್ರಾಪಂ ಪ್ರಭಾರಿ ಅಭಿವೃದ್ಧಿ ಅಧಿಕಾರಿ ರುದ್ರಯ್ಯ ಹಿರೇಮಠ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು, ಶಿಕ್ಷಕರು, ಶಾಲಾ ಮಕ್ಕಳು, ನರೇಗಾ ಕೂಲಿಕಾರರು, ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಹಾಜರಿದ್ದರು.