ಎಡಮ್ಯಾರ್‌ ಹಬ್ಬ: ಇಂದಿನಿಂದ ಮಕ್ಕಿ ಶಾಸ್ತಾವು ಉತ್ಸವ

| Published : May 02 2024, 12:28 AM IST

ಸಾರಾಂಶ

ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನದಲ್ಲಿ ಈ ವರ್ಷ ಎಡಮ್ಯಾರ್ ಹಬ್ಬ ಗುರುವಾರದಿಂದ ಮೇ 4ರ ವರೆಗೆ ಜರುಗಲಿದೆ. ಶ್ರೀ ಮಕ್ಕಿ ಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನ ಸುಂದರ ಪರಿಸರದಲ್ಲಿದ್ದು ವಾರ್ಷಿಕ ಎಡಮ್ಯಾರ್ ಹಬ್ಬಕ್ಕೆ ಅಣಿಯಾಗುತ್ತಿದೆ.

ಈ ವರ್ಷ ಎಡಮ್ಯಾರ್ ಹಬ್ಬ ಗುರುವಾರದಿಂದ ಮೇ 4ರ ವರೆಗೆ ಜರುಗಲಿದೆ. ಗುರುವಾರ ರಾತ್ರಿ 9ಕ್ಕೆ ಶ್ರೀ ದೇವರ ಕೊಟ್ಟಿ ಹಾಡುವುದು, ಶುಕ್ರವಾರ ಬೆಳಗ್ಗೆ 11ಕ್ಕೆ ಎತ್ತು ಪೋರಾಟ, ರಾತ್ರಿ 9.30ಕ್ಕೆ ದೀಪ ಆರಾಧನೆ (ಅಂದಿ ಬೊಳಕು), 4ರಂದು ಬೆಳಗ್ಗೆ 9ಕ್ಕೆ ಶ್ರೀ ಕಲ್ಯಾಟ ಅಜ್ಜಪ್ಪ ಕೋಲ, ಮಧ್ಯಾಹ್ನ ಅನ್ನದಾನದ ಬಳಿಕ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ ನಡೆಯುವುದು. ಈ ಸಂದರ್ಭ ಹರಕೆ, ಕಾಣಿಕೆ ಒಪ್ಪಿಸಿ ದೇವರ ಪ್ರಸಾದ ವಿತರಣೆ ಸಂಪನ್ನಗೊಳ್ಳಲಿದೆ.

ವರ್ಷಕ್ಕೆರಡು ಬಾರಿ ಹಬ್ಬ:

ಶ್ರೀ ಮಕ್ಕಿ ಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ವಿಭಿನ್ನ ಆಚರಣೆಗಳ ಹಬ್ಬ ಒಮ್ಮೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜರುಗಿದರೆ ಮತ್ತೊಮ್ಮೆ ಡಿಸೆಂಬರ್‌ನಲ್ಲಿ ನಡೆಯುತ್ತದೆ. ಎತ್ತೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೆರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ.

ಮಕ್ಕಿ ದೇವಾಲಯದ ವಿಶಿಷ್ಟತೆಗೆ ಸಂಬಂಧಿಸಿದಂತೆ ಹಲವು ಕಥೆಗಳು ಪಚ್ರಲಿತದಲ್ಲಿದೆ.

ಕೆಲವು ವರ್ಷಗಳ ಹಿಂದೆ ಮಕ್ಕಿ ದೇವಾಲಯದಲ್ಲಿ ಹಬ್ಬದ ಸಂದರ್ಭದಲ್ಲಿ ತಿರುವಾಳ ಕಾರ್ಯ ನಿರ್ವಹಿಸುತ್ತಿದವನನ್ನು ಯಾವುದೋ ಕಾರಣಕ್ಕಾಗಿ ಬಂಧಿಸಲಾಗಿತ್ತಂತೆ. ಹಬ್ಬದ ಸಂದರ್ಭದಲ್ಲಿ ದೇವಾಲಯದಲ್ಲಿ ಮುಗಿಲುಮುಟ್ಟುವಂತೆ ಚಂಡೆವಾದ್ಯ ಮೊಳಗಿತು. ಅದೇ ಸಂದರ್ಭದಲ್ಲಿ ಸೆರೆಮನೆಯಲ್ಲಿದ್ದವನಿಗೆ ತಿರುವಳ ( ಮೈಯಲ್ಲಿ ಆವೇಶ ಬರುವುದು) ಆರಂಭವಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದನಂತೆ. ಆತ ನೇರವಾಗಿ ಮಕ್ಕಿ ದೇವಾಲಯದ ಪ್ರಾಂಗಣಕ್ಕೆ ಬಂದವನೇ ದೇವರ ಮುಂದೆ ತನ್ನಕೈಯನ್ನು ಕೊಡವಿದ ತಕ್ಷಣ ಕೈಯ ಕೋಳ ಒಡೆದು ದೇಗುಲವಿರುವ ತಾಣದ ಹಲಸಿನ ಮರದ ರೆಂಬೆಯೊಂದರಲ್ಲಿ ಸಿಲುಕಿತು ಎನ್ನಲಾಗುತ್ತದೆ.

ಇದಕ್ಕೆ ಸಾಕ್ಷಿಯಾಗಿ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಹಲಸಿನ ಮರದಲ್ಲಿ ಕೋಳದ ತುಣುಕೊಂದು ಸಿಲುಕಿಕೊಂಡಿರುವುದನ್ನು ಈಗಲೂ ಕಾಣಬಹುದು.

ದೇವಾಲಯದಲ್ಲಿ ಸುಮಾರು ಐದಡಿ ಎತ್ತರದ ವೃತ್ತಾಕಾರದ ಕಟ್ಟೆಇದೆ. ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ದೇವರಿಗೆ ಕೊಡೆ ಹಿಡಿದಂತೆ ತೋರುವ ಒಂದು ಹಲಸಿನ ಮರ. ಸುತ್ತಲೂ ಹರಕೆಯ ಮಣ್ಣಿನಿಂದ ತಯಾರಿಸಿದ ನಾಯಿಗಳನ್ನು ಕಾಣಬಹುದು.