ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ (ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಉದ್ದೇಶಿತ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ಶನಿವಾರ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮ
ಪುತ್ತೂರು: ಕಾಲದಿಂದ ಕಾಲಕ್ಕೆ ಕಾಲೇಜು ಬೆಳೆಯುತ್ತದೆ. ಅನುಕೂಲಗಳನ್ನು ಹೆಚ್ಚುಗೊಳಿಸುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ಅವುಗಳನ್ನು ಬಳಸಬೇಕು. ಇದರಿಂದ ವಿದ್ಯಾರ್ಥಿಗಳ ಅಂತರಾಳದಲ್ಲಿರುವ ಬೆಳಕನ್ನು ಸಂಸ್ಥೆ ಹಾಗೂ ಗುರುಗಳಿಗೆ ಬೆಳಗಿಸಲು ಸಾಧ್ಯವಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ (ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಉದ್ದೇಶಿತ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ಶನಿವಾರ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಭಾರತ ಜ್ಞಾನಕ್ಕೋಸ್ಕರ ಹಾತೊರೆಯುವ ದೇಶ. ಹಲವಾರು ಮಂದಿ ಹೊಸತು ತಿಳಿದು ದೇಶವನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ. ಇನ್ನೊಬ್ಬರ ನಾಶಕ್ಕಾಗಿ ಬೇರೆ ದೇಶಗಳು ಯೋಜನೆ ತಯಾರಿಸುತ್ತಿರುವಾಗ, ಭಾರತಸಮಾಜೋದ್ಧಾರಕರಾಗಿ ಬದುಕುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದೆ. ವಿದ್ಯಾರ್ಥಿಗಳು ಭಾರತೀಯ ಚಿಂತನೆಯನ್ನು ಅಧ್ಯಯನ ಮಾಡುವುದರೊಂದಿಗೆ ಉತ್ತಮ ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣವು ಶಕ್ತಿಯನ್ನು ನೀಡುತ್ತದೆ. ಆ ಬೇರನ್ನು ಹಿಡಿದು ಬೆಳೆಯಬೇಕು. ಪ್ರತಿಯೊಬ್ಬನೂ ದೇಶಕ್ಕೋಸ್ಕರ ಬದುಕುವ ಪ್ರಜೆಯಾಗಬೇಕು ಎಂದು ಹೇಳಿದರು.ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್‍ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಸಂಘದ ಸದಸ್ಯರಾದ ಬಲರಾಮ ಆಚಾರ್ಯ, ಡಾ. ಸುಧಾ ರಾವ್, ಸತೀಶ್ ಹಾಗೂ ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳಾದ ಶ್ರೀನಿವಾಸ ಸಾಮಂತ, ಶುಭಾ ಅಡಿಗ, ಸುಕುಮಾರ್ ರಾವ್, ಶೋಭಾ ಕೊಳತ್ತಾಯ, ಕಟ್ಟಡದ ಎಂಜಿನಿಯರ್ ರವಿರಾಮ್ ಮತ್ತಿತ್ತರರು ಉಪಸ್ಥಿತರಿದ್ದರು.ಕಾಲೇಜಿನ ಪ್ರಾಚಾರ್ಯ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಡಾ. ವಿಜಯ ಸರಸ್ವತಿ ವಂದಿಸಿದರು. ಕಾಲೇಜಿನ ವಿಶೇಷಾಧಿಕಾರಿ ಡಾ. ಮನಮೋಹನ ಎಂ. ನಿರೂಪಿಸಿದರು.ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಉದ್ದೇಶಿತ ನೂತನ ಕಟ್ಟಡಕ್ಕೆ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿ, ಶಿಲಾನ್ಯಾಸ ಅನಾವರಣಗೊಳಿಸಿದರು. ೨೦೧೩ರಲ್ಲಿ ಪ್ರಾರಂಭಿಸಲಾದ ಈ ಸಂಸ್ಥೆಯು, ಹಲವಾರು ವಿದ್ಯಾರ್ಥಿಗಳಿಗೆ ಜ್ನಾನವನ್ನು ಧಾರೆಯೆರೆದಿದೆ. ಕಟ್ಟಡವನ್ನು ವಿಸ್ತೃತಗೊಳಿಸಿ, ಮತ್ತಷ್ಟುಸೌಕರ್ಯಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ.