ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಿ: ಹೇಮಲತಾ ಹುಲ್ಲೂರ

| Published : Jun 14 2024, 01:10 AM IST

ಸಾರಾಂಶ

ಈಗ ಹೆಚ್ಚಾಗಿ ಗ್ಯಾರೇಜ್, ಹೋಟೆಲ್‌ಗಳಲ್ಲಿ ಕೆಲಸ ಮಾಡುವುದು ರೂಢಿಯಾಗುತ್ತಿದೆ.

ಹೊಸಪೇಟೆ: ದೇಶದ ಆಸ್ತಿಯಾಗಿರುವ ಮಕ್ಕಳನ್ನು ದುಡಿಮೆಗೆ ಹಚ್ಚದೇ ಶಿಕ್ಷಣವಂತರಾಗಿ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೇಮಲತಾ ಬಿ. ಹುಲ್ಲೂರ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಇಲಾಖೆ ವತಿಯಿಂದ ನಗರದ ಡಾನ್‌ ಬಾಸ್ಕೋ ಸಂಸ್ಥೆಯಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ದೇಶದ ಆಸ್ತಿಯಾಗಿದ್ದಾರೆ. ಅವರನ್ನು ದುಡಿಮೆಗೆ ಹಚ್ಚದೇ ಅವರಿಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸಬೇಕು ಎಂದರು.

ಈ ಮೊದಲು ಬಾಲ ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಕಾಣಸಿಗುತ್ತಿದ್ದರು. ಈಗ ಹೆಚ್ಚಾಗಿ ಗ್ಯಾರೇಜ್, ಹೋಟೆಲ್‌ಗಳಲ್ಲಿ ಕೆಲಸ ಮಾಡುವುದು ರೂಢಿಯಾಗುತ್ತಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಶಿಕ್ಷಣ ಮಕ್ಕಳ ಸಂವಿಧಾನ ಬದ್ಧ ಹಕ್ಕಾಗಿದೆ. ಅವರಿಗೆ ಪ್ರತಿಯೊಂದು ಸೌಲಭ್ಯ ಸಿಗುವಂತಾಗಬೇಕು ಎಂದು ಸಲಹೆ ನೀಡಿದರು.

ಅಪರ ಸಿವಿಲ್ ನ್ಯಾಯಾಧೀಶ ಅಶೋಕ್ ಎಚ್.ಆರ್. ಅವರು ಮಾತನಾಡಿ, ಮಕ್ಕಳು ಕಟ್ಟಡ ಕೆಲಸದಲ್ಲಿ, ಅಂಗಡಿಗಳಲ್ಲಿ, ಬೇಕರಿ, ದೊಡ್ಡ ದೊಡ್ಡ ಮನೆಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೆಲಸದಾಳುಗಳಾಗಿದ್ದಾರೆ. ಇಂತಹ ಅನಿಷ್ಟ ಬಾಲ ಕಾರ್ಮಿಕ ಪದ್ಧತಿಯ ಪಿಡುಗನ್ನು ಹೋಗಲಾಡಿಸಬೇಕು ಎಂದರು.

ಬಳಿಕ ಡಾನ್ ಬಾಸ್ಕೊ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತ್ತೂರ ಮಾತನಾಡಿ, ಬಾಲ ಕಾರ್ಮಿಕ ಪದ್ದತಿಯನ್ನು ಹೋಗಲಾಡಿಸುವುದು, ಅದರಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ವಕೀಲ ಎ. ಕರುಣಾನಿಧಿ ವಿಶೇಷ ಉಪನ್ಯಾಸ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ, ಮೂರನೇ ಅಪರ ಸಿವಿಲ್ ನ್ಯಾಯಾಧೀಶರಾದ ಚೈತ್ರಾ ಜೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ವೇತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಕುಮಾರ್ ಉಂಕ್ರಿ, ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಪಟ್ಟಣ ಪೊಲೀಸ್ ಠಾಣೆಯ ಪಿಐ ಲಕನ್ ಆರ್.ಮಸುಗುಪ್ಪಿ, ಸಂಚಾರ ಠಾಣೆ ಪಿಐ ರವೀಂದ್ರ ವೈ.ವಿ., ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಪಾ.ರೋಷನ್, ಸಮಾಜ ಕಾರ್ಯ ವಿಭಾಗದ ನಿರ್ದೇಶಕ ಫ್ರಾನ್ಸಿಸ್ ಮತ್ತಿತರರಿದ್ದರು.

ಜಾಗೃತಿ ಜಾಥಾ:

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ನಿಮಿತ್ತ ನಗರದ ಪ್ರಮುಖ ಬೀದಿಗಳಲ್ಲಿ ಜನ ಜಾಗೃತಿ ಜಾಥಾ ನಡೆಯಿತು. ನಗರದ ಸರ್ದಾರ್ ಪಟೇಲ್ ಸರ್ಕಾರಿ ಪ್ರೌಢಶಾಲೆಯಿಂದ ಆರಂಭವಾದ ಜಾಥಾ ನಗರದ ವಿವಿಧೆಡೆ ಸಂಚರಿಸಿ ಡಾನ್ ಬಾಸ್ಕೋ ಸಂಸ್ಥೆಗೆ ತಲುಪಿತು.