ರೋಣ: ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಮಹತ್ವಪೂರ್ಣ ಚಿಂತನೆಗಳು ಮತ್ತು ಸಮಾಜ ಪರಿವರ್ತನೆಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಸಿ.ಎಸ್. ನೀಲಗುಂದ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಮಾನ ಹಕ್ಕುಗಳು, ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೀಡಿದ ಮಹಾನ್ ನಾಯಕರು. ಅವರ ತತ್ವ, ಸಂದೇಶ ಯುವಪೀಳಿಗೆಗೆ ದಾರಿದೀಪವಾಗಿದ್ದು, ಶಿಕ್ಷಣದ ಮೂಲಕ ವ್ಯಕ್ತಿ ಮತ್ತು ಸಮಾಜ ಎರಡೂ ಪ್ರಗತಿಯನ್ನು ಸಾಧಿಸಬಹುದು ಎಂದರು.ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ದೇವರಾಜ ಸಜ್ಜನಶೆಟ್ಟರ ಮಾತನಾಡಿ, ಡಾ. ಅಂಬೇಡ್ಕರ್ ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಮಹನೀಯರಾಗಿದ್ದಾರೆ. ಭಾರತದಲ್ಲಿ ನಮ್ಮಂತ ಹಿಂದುಳಿದ ಜನರು ಶಿಕ್ಷಣ ಕಲಿತಿದ್ದೇವೆ ಅಂದರೆ ಅದಕ್ಕೆ ಅವರೇ ನೇರ ಕಾರಣ. ಈ ಹಿನ್ನೆಲೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ತಾಲೂಕು ಪಂಚಾಯಿತಿ ಸಿಬ್ಬಂದಿ ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸಿ, ಸಮಾನತೆ ಮತ್ತು ಸಹೋದರತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಪ್ರತಿಜ್ಞೆಯನ್ನು ಕೈಗೊಂಡರು. ಕಾರ್ಯಕ್ರಮದಲ್ಲಿ ತಾಪಂ‌ ಕಾರ್ಯಾಲಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಸರ್ವರಿಗೂ ಒಳಿತಾಗುವ ಸಂವಿಧಾನ ನೀಡಿದ ಹೆಗ್ಗಳಿಕೆ


ನರಗುಂದ: ಬಡ ಕುಟುಂಬದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜನಿಸಿ ಕಷ್ಟಪಟ್ಟು ಶಿಕ್ಷಣ ಕಲಿತು ದೇಶದ ಎಲ್ಲ ಸಮುದಾಯದ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಸಂವಿಧಾನ ರಚಿಸಿದರು ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.ಮಂಗಳವಾರ ತಾಲೂಕು ಆಡಳಿತ, ತಾಪಂ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಹಾಗೂ ಡಾ. ಬಾಬು ಜಗಜೀವನರಾಂ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದಲ್ಲಿ ಯಾವ ವ್ಯಕ್ತಿಗೆ ಶಿಕ್ಷಣ ಜ್ಞಾನ ಇರುತ್ತದೆಯೋ ಆ ವ್ಯಕ್ತಿಗೆ ಏನು ಸಿಗಬೇಕೋ ಅವೆಲ್ಲ ಸಿಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕಲಿಸಬೇಕು ಎಂದರು.

ಸಣ್ಣ ಸಮುದಾಯದಲ್ಲಿ ಡಾ. ಬಾಬು ಜಗಜೀವನರಾಂ ಅವರು ಜನಿಸಿ ಕಾರ್ಮಿಕ, ಆಹಾರ, ರಕ್ಷಣಾ ಇಲಾಖೆ ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರು ಎಂದು ಶ್ಲಾಘಿಸಿದರು.ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ದೇಶ ಸುಭದ್ರವಾಗಿರಲು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣವಾಗಿದೆ ಎಂದರು.

ಡಾ. ಸಿ.ಬಿ. ನಂದನ, ಡಾ. ಪರಶುರಾಮ ಜೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಾಸು ಜೋಗಣ್ಣವರ, ನ್ಯಾಯವಾದಿ ಎಫ್.ವೈ. ದೊಡ್ಡಮನಿ, ಎನ್.ಕೆ. ಸೋಮಾಪುರ, ವಿಜಯ ಚಲವಾದಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಂ. ಬಡಿಗೇರ, ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ, ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ, ಸಿಪಿಐ ಮಂಜುನಾಥ ನಡುವಿನಮನಿ, ಬನಹಟ್ಟಿ ಗ್ರಾಪಂ ಕಾರ್ಯದರ್ಶಿ ಮಲ್ಲಪ್ಪ ಪೂಜಾರ, ಎಸ್.ವೈ. ಸುರಕೋಟ, ಪ್ರಮೋದ ಜಾಧವ ಮುಂತಾದವರು ಇದ್ದರು.