ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ನಮ್ಮ ಬಳಿ ವಿದ್ಯೆ ಎಂಬುವುದು ಇದ್ದರೇ ಏನಾದರೂ ಸಾಧನೆ ಮಾಡಬಹುದು ಎಂದು ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಚಿಕ್ಕಮಕ್ಕಳ ತಜ್ಞ ಡಾ.ವೀರೇಶ ತಳ್ಳೊಳ್ಳಿ ಹೇಳಿದರು.ಪಟ್ಟಣದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶ್ರೀ ಭಾಗ್ಯವಂತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಭಾಗ್ಯವಂತಿ ನರ್ಸಿಂಗ್ ಕಾಲೇಜ್‌ನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ್ಞಾನ ಶಕ್ತಿಯ ಜೊತೆಗೆ ಏಕಾಗ್ರತೆ ಎಂಬುವುದು ವಿದ್ಯಾರ್ಥಿಗಳಿಗೆ ಅವಶ್ಯವಿದೆ. ಏಕಾಗ್ರತೆ ರೂಢಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ಇದರಿಂದ ಪುಸ್ತಕದಲ್ಲಿಯ ಅಕ್ಷರ ಮಸ್ತಕದಲ್ಲಿ ಮೂಡಲು ಸಾಧ್ಯವಾಗಲಿದೆ ಎಂದು ಸ್ವಾಮಿ ವಿವೇಕಾನಂದರು ಹೊಂದಿದ್ದ ಅಪಾರವಾದ ಜ್ಞಾನದಿಂದ ಇಡೀ ವಿಶ್ವದಲ್ಲಿಯೇ ಅವರ ಹೆಸರು ಪ್ರಜ್ವಲಿಸಿದ್ದರು ಎಂದು ವಿವರಿಸಿದರು.
ಮುದ್ದೇಬಿಹಾಳ ಎಂಜಿವಿಸಿ ಕಾಲೇಜ್‌ನ ಉಪನ್ಯಾಸಕ ವಿ.ಎಸ್.ಲಮಾಣಿ ಮಾತನಾಡಿ, ಕೇವಲ ಶಿಕ್ಷಣ ಕಲಿಸಿದರೆ ಗುರುವಾಗುವುದಿಲ್ಲ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ತಂದೆ-ತಾಯಿಯ ಸ್ವರೂಪದಲ್ಲಿ ನಿಂತು ಸಂಸ್ಕಾರವನ್ನು ಬಿತ್ತುವಂತಹ ಕಾರ್ಯ ಮಾಡಬೇಕು. ಅಂದಾಗ ಮಕ್ಕಳಿಗೆ ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಸಂಸ್ಕಾರಯುತ ಬದುಕನ್ನು ರೂಪಿಸಿದಂತಾಗುತ್ತದೆ. ಅಂತಹ ಕಾರ್ಯವನ್ನು ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಸವಿತಾ ತಳ್ಳೊಳ್ಳಿ ಅವರು ತಾಯಿಯ ಸ್ವರೂಪದಲ್ಲಿ ಸಂಸ್ಕಾರಯುತ ಪಾಠ ಬೋಧನೆ ಮಾಡಿರುವುದು ಮಕ್ಕಳಲ್ಲಿ ನಾವು ನೀವೆಲ್ಲರೂ ಇಂದು ಕಾಣುತ್ತಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಒಬ್ಬ ತಾಯಿಯಾಗಿ ಯಾವ ರೀತಿ ತನ್ನ ಮಗುವಿಗೆ ಹೆಜ್ಜೆ ಹಾಕುವುದನ್ನು ಕಲಿಸುತ್ತಾರೋ ಹಾಗೆ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತಗೆ ಸಂಸ್ಕಾರಯುತ ಬದುಕನ್ನು ರೂಪಿಸುವಂತಹ ಕಾರ್ಯ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯಲ್ಲಿ ಮಾಡಲಾಗಿದೆ. ಇದನ್ನು ವಿದ್ಯಾರ್ಥಿಗಳ ಸಾಧನೆಯ ಹೆಜ್ಜೆಯಲ್ಲಿ ಗುರುತಿಸಬಹುದಾಗಿದೆ ಎಂದರು.
ಮುದ್ದೇಬಿಹಾಳ ಎಂಜಿಎಂಕೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ ಹರನಾಳ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆಯಾಗಿ ಹೊರಹೊಮ್ಮಬೇಕು. ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರಯುತ ಬದುಕಿನೆಡೆಗೆ ಸಾಗಲೆಂಬ ಉದ್ದೇಶದಿಂದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯನ್ನು ಡಾ.ವೀರೇಶ ತಳ್ಳೊಳ್ಳಿ ಕಟ್ಟಿದ್ದಾರೆ. ಜಿಲ್ಲೆಯಲ್ಲಿಯೇ ದಿನಕ್ಕೆ ೨೦೦ಕ್ಕೂ ಅಧಿಕ ಬಡರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಏಕೈಕ ವೈದ್ಯರೆನಿಸಿಕೊಂಡಿದ್ದಾರೆ. ಇವರು ತಾವು ಶಿಕ್ಷಣ ಕಲಿಯುವ ಸಮಯದಲ್ಲಿ ಪಟ್ಟ ಕಷ್ಟ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಬರಬಾರದೆಂಬ ಉದ್ದೇಶದಿಂದ ಸಂಸ್ಥೆ ಕಟ್ಟಿದ್ದಾರೆ. ಶ್ರದ್ಧೆಯಿಂದ ಓದುವುದರೊಂದಿಗೆ ಸಾಧನೆಯ ತವಕದೊಂದಿಗೆ ಮುನ್ನಡೆಯುತ್ತ ಸಾಗಿದರೇ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.ಮಾವಿನಭಾವಿಯ ಬಸವರಾಜ ಗುರೂಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಳಕಲ್ಲದ ವಿ.ಸಿ.ಅಕ್ಕಿ ಸ್ಮಾರಕ ಸಂಘದ ಆಡಳಿತಾಧಿಕಾರಿ ಅವಿನಾಶ ಅಕ್ಕಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ.ಶ್ರೀಕಾಂತ ಪಾಟೀಲ ಅವರು ಪರೀಕ್ಷೆಗಳನ್ನು ಯಾವ ರೀತಿಯಾಗಿ ಎದುರಿಸಬೇಕೆಂಬುವುದರ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಮಯದಲ್ಲಿ ಭಾಗೇಶ ತಳ್ಳೊಳ್ಳಿ, ಸ್ವಪ್ನಾ ಪಡಸಾಲಿ, ಸುಮಯ್ಯಾ ಲಾಹೋರಿ, ಭಾಗ್ಯಶ್ರೀ ಗೋನಾಳ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸವಿತಾ ವೀ.ತಳ್ಳೊಳ್ಳಿ, ನ್ಯಾಯವಾದಿ ಡಿ.ವೈ.ಮೇಟಿ, ಪ್ರಾಚಾರ್ಯ ಡಿ.ಎಲ್.ಬನಸೋಡೆ, ಹುಗ್ಗಿ, ರಾಜಹ್ಮದ್ ಮೊದಲಾದವರು ಇದ್ದರು. ಪ.ಪೂ.ಕಾಲೇಜ್ ಪ್ರಾಚಾರ್ಯ ರಮೇಶ ಪೂಜಾರಿ ಹಾಗೂ ನರ್ಸಿಂಗ್ ಕಾಲೇಜ್‌ನ ಕು.ಅಶ್ವಿನಿ ವರದಿ ವಾಚಿಸಿದರು. ಇಲಿಯಾಸ್ ಚೌದ್ರಿ ನಿರೂಪಿಸಿದರು. ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಅನಿಲ ಪತ್ರಿಮಠ ವಂದಿಸಿದರು.ಒಬ್ಬ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿ ಲಕ್ಷಾಂತರ ಫೀ ಕಟ್ಟಿ ಕಲಿಯುವುದು ತುಂಬಾ ಕಷ್ಟಕರವಾಗಿದೆ. ರೈತರ ಮಕ್ಕಳು ಬಡವರ ಮಕ್ಕಳು ಉತ್ತಮ ಉನ್ನತ ವ್ಯಾಸಂಗ ಮಾಡಬೇಕಾಗಿದೆ. ಇದನ್ನು ಮನಗಂಡು ಕಡಿಮೆ ಫೀ ನಲ್ಲಿ ಮಕ್ಕಳು ಉತ್ತಮ ಶಿಕ್ಷಣಪಡೆಯಲಿ ಎಂಬ ಉದ್ದೇಶದೊಂದಿಗೆ ನಾನು ದುಡಿದ ಪ್ರತಿ ಬೆವರಿನ ಹನಿಯಿಂದ ಈ ಸಂಸ್ಥೆಯನ್ನು ಕಟ್ಟಲಾಗಿದೆ. ನಾನು ಕಾಲೇಜ್ ಕಟ್ಟಡ ಕಟ್ಟಬಹುದು. ಆದರೆ, ಈ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಈ ಸಂಸ್ಥೆ ಕಟ್ಟಿದ್ದಕ್ಕೂ ಸಾರ್ಥಕವಾಗಲಿದೆ.-ಡಾ.ವೀರೇಶ ತಳ್ಳೊಳ್ಳಿ, ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಚಿಕ್ಕಮಕ್ಕಳ ತಜ್ಞರು.