ಶಾಲೆಗಳ ಪ್ರಾರಂಭೋತ್ಸವಕ್ಕೆ ಶಿಕ್ಷಣ ಇಲಾಖೆ ಸಜ್ಜು..!

| Published : May 28 2024, 01:05 AM IST

ಶಾಲೆಗಳ ಪ್ರಾರಂಭೋತ್ಸವಕ್ಕೆ ಶಿಕ್ಷಣ ಇಲಾಖೆ ಸಜ್ಜು..!
Share this Article
  • FB
  • TW
  • Linkdin
  • Email

ಸಾರಾಂಶ

ಮೇ 31ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದೆ. ಶಾಲೆಗೆ ತಳಿರು ತೋರಣ ಕಟ್ಟಿ, ಡೋಲು, ನಗಾರಿ ಮೂಲಕ ಮಕ್ಕಳನ್ನು ಕರೆ ತಂದು ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲು ಅಧಿಕಾರಿಗಳ ಚಿಂತನೆ ನಡೆಸಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ಬೇಸಿಗೆ ರಜೆ ಮುಗಿಯುತ್ತಿದ್ದಂತೆ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಗರಿದೆಗರಿವೆ. ಶಾಲಾ ಶಿಕ್ಷಣ ಇಲಾಖೆಯು ಶಾಲೆಗಳ ಪ್ರಾರಂಭೋತ್ಸವಕ್ಕೆ ಬೇಕಾದ ಎಲ್ಲ ಸಿದ್ಧತೆ ಕೈಗೊಂಡಿದೆ.

ಮೇ 29ರಿಂದ 2024-25ನೇ ಸಾಲಿನ ಶಾಲೆಗಳು ಪ್ರಾರಂಭವಾಗುತ್ತಿದ್ದು, ಪೂರ್ವ ಸಿದ್ಧತೆ, ಪೂರ್ವಭಾವಿ ಸಭೆ, ಶಾಲಾ ಪ್ರಾರಂಭೋತ್ಸವ ಹಾಗೂ ಮಿಂಚಿನ ಸಂಚಾರ ಎಂಬ ನಾಲ್ಕು ಹಂತಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 1018 ಪ್ರಾಥಮಿಕ ಶಾಲೆಗಳು, 495 ಪ್ರೌಢ ಶಾಲೆಗಳು ಸೇರಿದಂತೆ ಒಟ್ಟು 1513 ಶಾಲೆಗಳಿವೆ. ಹಾಗೆಯೇ 6708 ಪ್ರಾಥಮಿಕ ಶಾಲಾ ಶಿಕ್ಷಕರು, 4630 ಪ್ರೌಢ ಶಾಲಾ ಶಿಕ್ಷಕರು ಸೇರಿ ಒಟ್ಟು 11338 ಶಿಕ್ಷಕರು ಇದ್ದಾರೆ. ಈ ಎಲ್ಲ ಶಾಲೆಗಳಲ್ಲಿ ಮಕ್ಕಳು ಮತ್ತೆ ಶಾಲೆಗೆ ಬರುವಂತೆ ಆಕರ್ಷಿಸಲು ಬೇಕಾದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಹಿರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನಾಲ್ಕು ದಿನ ಪೂರ್ವಸಿದ್ಧತೆ:

ಮೇ 29ರಂದು ಪೂರ್ವ ಸಿದ್ಧತೆ ನಡೆಯಲಿದ್ದು ಶಾಲಾವರಣ, ಶಾಲಾ ಕೊಠಡಿ ಹಾಗೂ ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರು, ಟ್ಯಾಂಕ್‌ ಸ್ವಚ್ಛತೆ, ಅಡುಗೆ ಮನೆ, ಪಾತ್ರಗಳು, ಆಹಾರ ಧಾನ್ಯಗಳ ವ್ಯವಸ್ಥೆ, ಶಾಲಾ ವೇಳಾಪಟ್ಟಿ ಸಿದ್ಧತೆ, ತರಗತಿ ವೇಳಾಪಟ್ಟಿ ಸಿದ್ದತೆ, ಶಿಕ್ಷಕರಿಗೆ ವಿಷಯ ಮತ್ತು ತರಗತಿ ಹಂಚಿಕೆ, ಶಾಲಾ ದಾಖಲಾತಿ ಆಂದೋಲನ ನಡೆಸುವುದು, ಎಸ್‌ಡಿಎಂಸಿ ಸಭೆ ನಡೆಸಿ ಶಾಲಾ ಪ್ರಾರಂಭೋತ್ಸವ ಸಿದ್ಧತೆ ಕೈಗೊಳ್ಳುವುದು ಮಾಡಲಾಗುತ್ತಿದೆ. ಮೇ 30ರಂದು ಪೂರ್ವ ಭಾವಿ ಸಭೆ ನಡೆಯಲಿದೆ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸಭೆ ನಡೆಸಬೇಕು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಹೊರತುಪಡಿಸಿ ಪೋಷಕರ ಸಭೆ ನಡೆಸಿ ಇಲಾಖಾ ಪ್ರೋತ್ಸಾಹದಾಯಕ ಸಭೆ ನಡೆಸಿ ಮಾಹಿತಿ ನೀಡಲಿದ್ದಾರೆ.

31ರಂದು ಪ್ರಾರಂಭೋತ್ಸವ.

ಇನ್ನು, ಮೇ 31ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದೆ. ಶಾಲೆಗೆ ತಳಿರು ತೋರಣ ಕಟ್ಟಿ, ಡೋಲು, ನಗಾರಿ ಮೂಲಕ ಮಕ್ಕಳನ್ನು ಕರೆ ತಂದು ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲಾಗುವುದು. ಹಾಗೆಯೇ, ಜೂನ್‌ 1ರಿಂದ 9ರ ವರೆಗೆ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳು ವಿವಿಧ ಶಾಲೆಗಳಿಗೆ ಮಿಂಚಿನ ಸಂಚಾರ ನಡೆಸಲಿದ್ದಾರೆ. ಬ್ಲಾಕ್‌ ಹಂತದಲ್ಲಿ ಹತ್ತು ತಂಡಗಳನ್ನು ರಚಿಸಿದ್ದು ಎಲ್ಲ ಶಾಲೆಗಳು ತೆರೆಯಲ್ಪಟ್ಟಿವೆಯೇ? ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗಿವೆಯೇ? ಎಂಬುದನ್ನು ಮಿಂಚಿನ ಸಂಚಾರದಲ್ಲಿ ತಂಡಗಳು ಖಚಿತಪಡಿಸಿಕೊಳ್ಳಲಿವೆ. ಶಾಲಾ ಕೊಠಡಿ, ಆವರಣ, ಶೌಚಾಲಯ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಲಾಗುತ್ತದೆ. ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಪರಿಶೀಲನೆಯೂ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಯೋಜನಾಧಿಕಾರಿ ಎಸ್‌.ಎಂ. ಹುಡೇದಮನಿ ಮಾಹಿತಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಈಗಾಗಲೇ ಶೇ. 90ರಷ್ಟು ಪುಸ್ತಕ ಹಾಗೂ ಸಮವಸ್ತ್ರಗಳು ಜಿಲ್ಲೆಗೆ ಬಂದಿದ್ದು ಕೆಲವೇ ದಿನಗಳಲ್ಲಿ ಆಯಾ ಶಾಲೆಗಳಿಗೆ ಹಂಚಿಕೆಯಾಗಲಿದೆ. ಶಾಲಾ ಪ್ರಾರಂಭೋತ್ಸವದ ಹೊತ್ತಿಗೆ ಮಕ್ಕಳು ಮತ್ತೆ ಶಾಲೆಗೆ ಬರಲು ಬೇಕಾದ ಎಲ್ಲ ವ್ಯವಸ್ಥೆ ಆಗಲಿದ್ದು ಅದ್ಧೂರಿಯಾಗಿ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ನಡೆಯಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ. ಪಾಲಕರು, ಶಿಕ್ಷಕರು ಹಾಗೂ ಮಕ್ಕಳು ಸಹಕರಿಸಬೇಕು. ಅಲ್ಲದೇ, ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಪ್ರೋತ್ಸಾಹದಾಯಕ ಯೋಜನೆಗಲಿದ್ದು ಪಾಲಕರು-ಪೋಷಕರು ಸರ್ಕಾರಿ ಶಾಲೆಗಳಿಗೆ ಕಳುಹಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್. ಕೆಳದಿಮಠ ಕರೆ ನೀಡಿದ್ದಾರೆ.