ಕೌಶಲ ವೃದ್ಧಿಯ ದಿಸೆಯಲ್ಲಿ ಶಿಕ್ಷಣ ಫೌಂಡೇಷನ್ ಪಾತ್ರ ಶ್ಲಾಘನೀಯ: ಜಿಲ್ಲಾಧಿಕಾರಿ ಶಿಲ್ಪಾನಾಗ್

| Published : Oct 27 2024, 02:20 AM IST

ಕೌಶಲ ವೃದ್ಧಿಯ ದಿಸೆಯಲ್ಲಿ ಶಿಕ್ಷಣ ಫೌಂಡೇಷನ್ ಪಾತ್ರ ಶ್ಲಾಘನೀಯ: ಜಿಲ್ಲಾಧಿಕಾರಿ ಶಿಲ್ಪಾನಾಗ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಕೌಶಲ್ಯವನ್ನು ವೃದ್ಧಿಗೊಳಿಸುವ ದಿಸೆಯಲ್ಲಿ ಶಿಕ್ಷಣ ಫೌಂಡೇಷನ್ ಪಾತ್ರ ಶ್ಲಾಘನೀಯವಾದದ್ದು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಹನೂರಿನಲ್ಲಿ ಸ್ಟೆಮ್ ಅರಿವು ಹಾಗೂ ಎಫ್.ಎಲ್.ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಕೌಶಲ್ಯವನ್ನು ವೃದ್ಧಿಗೊಳಿಸುವ ದಿಸೆಯಲ್ಲಿ ಶಿಕ್ಷಣ ಫೌಂಡೇಷನ್ ಪಾತ್ರ ಶ್ಲಾಘನೀಯವಾದದ್ದು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಿಕ್ಷಣ ಫೌಂಡೇಷನ್ ಹಾಗೂ ಆರ್.ಎಸ್.ಎ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸ್ಟೆಮ್ ಅರಿವು ಹಾಗೂ ಎಫ್.ಎಲ್.ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿಗೂ ಕೆಲವು ಮಕ್ಕಳಲ್ಲಿ ಪ್ರಶ್ನೆ ಪತ್ರಿಕೆ ಓದಿ ಅರ್ಥೈಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಕೆಲವು ಸಂಸ್ಥೆಗಳು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿವೆ. ಜಿಲ್ಲೆಯ ಪರಿಸ್ಥಿತಿಯನ್ನು ವಿಶ್ಲೇಷಿಸಿದಾಗ ಸಂಪನ್ಮೂಲ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಭೌಗೋಳಿಕವಾಗಿ ಬಹು ವಿಸ್ತೀರ್ಣ ಹೊಂದಿರುವ ಹನೂರು ತಾಲೂಕು ಹಿಂದುಳಿದ ತಾಲೂಕು ಆಗಿದೆ. ಇಂತಹ ಪ್ರದೇಶದಲ್ಲಿ ಶಿಕ್ಷಣ ಫೌಂಡೇಶನ್ ಸ್ಟೆಮ್ ಅರಿವು ಹಾಗೂ ಎಫ್.ಎಲ್.ಎನ್ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಶಿಕ್ಷಣ ಫೌಂಡೇಶನ್ ರಾಜ್ಯದಲ್ಲಿ ಶಿಕ್ಷಣಕ್ಕೆ ಪೂರಕವಾಗಿ ಹಲವು ಕಾರ್ಯಕ್ರಮ ರೂಪಿಸುತ್ತಿರುವುದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೊರಬರುವ ದಿಸೆಯಲ್ಲಿ ಜಿಪಂ ಸಿಇಒ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ಆರ್.ಎಸ್.ಎ.ಸಂಸ್ಥೆ ಸಹಕಾರ:

ಶಿಕ್ಷಣ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಒಡೆಯರ್ ಮಾತನಾಡಿ, ಮಕ್ಕಳ ಶಿಕ್ಷಣ ಉತ್ತಮ ಪಡಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧಡೆ ಹಲವು ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗುತ್ತಿದೆ. ಸಮೀಕ್ಷೆಯ ಪ್ರಕಾರ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರವೇಶಿಸುವ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಗಣಿತದ ಬಗ್ಗೆ ಅರಿವು ಇಲ್ಲದೆ ಇರುವುದು ಬೆಳಕಿಗೆ ಬಂದಿದೆ ಜೊತೆಗೆ ಕನ್ನಡ ಭಾಷೆಯ ಬಳಕೆ ಕೊರತೆ ಇದೆ. ಮಕ್ಕಳಲ್ಲಿ ಮೂಲ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಆರ್.ಎಸ್.ಎ. ಸಹಯೋಗದಲ್ಲಿ ತಾಲೂಕಿನ 77 ಶಾಲೆಗಳಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ. ಶೇ.100 ರಷ್ಟು ಗುರಿ ಹೊಂದಲು ನಿರ್ಧರಿಸಲಾಗಿದೆ. ಆದ್ದರಿಂದ ಶಿಕ್ಷಕರು ಈ ಬಗ್ಗೆ ಅಗತ್ಯ ಮುತುವರ್ಜಿ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಬಿಇಒ ಗುರುಲಿಂಗಯ್ಯ, ಶಿಕ್ಷಣ ಫೌಂಡೇಶನ್ ಸಿಇಒ ಪ್ರಸನ್ನ ಒಡೆಯರ್, ಆರ್.ಎಸ್.ಎ.ನಿರ್ದೇಶಕರಾದ ಧೀರಜ್ ಚೋರರಿಯಾ, ಮತ್ತು ಕಂಪನಿ ಕಾರ್ಯದರ್ಶಿ ಶ್ವೇತಾ ಸಕ್ಸೆನಾ, ಮಲ್ಲಿಕಾರ್ಜುನ್ ಮತ್ತು ವಿಗ್ನೇಶ್, ಗುಂಡ್ಲುಪೇಟೆ ಸಂಯೋಜಕ ಮಹದೇವಸ್ವಾಮಿ, ಹನೂರು ತಾಲೂಕು ಸಂಯೋಜಕ ಮಹೇಶ್.ಎಂ. ಮತ್ತು ತಂಡದವರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.