ಶಿಕ್ಷಣ ಮತ್ತು ಆರೋಗ್ಯ ಈ ದೇಶವನ್ನು ಸದೃಢಗೊಳಿಸುವ ಶಕ್ತಿಯಾಗಿದ್ದು, ಇವೆರಡನ್ನು ವಿದ್ಯಾರ್ಥಿಗಳು ಉತ್ತಮವಾಗಿಟ್ಟುಕೊಳ್ಳಲು ಶ್ರಮಿಸಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ತಿಳಿಸಿದರು.
ಬೀರೂರು: ಶಿಕ್ಷಣ ಮತ್ತು ಆರೋಗ್ಯ ಈ ದೇಶವನ್ನು ಸದೃಢಗೊಳಿಸುವ ಶಕ್ತಿಯಾಗಿದ್ದು, ಇವೆರಡನ್ನು ವಿದ್ಯಾರ್ಥಿಗಳು ಉತ್ತಮವಾಗಿಟ್ಟುಕೊಳ್ಳಲು ಶ್ರಮಿಸಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ತಿಳಿಸಿದರು.ಜೋಡಿಹೋಚಿಹಳ್ಳಿ ಮೊರಾರ್ಜಿ ಶಾಲೆಯಲ್ಲಿ ಶನಿವಾರ ಚಿಕ್ಕಮಗಳೂರು ಸ್ಫೂರ್ತಿ ಅಕಾಡೆಮಿಯ ಸಹಯೋಗದೊಂದಿಗೆ ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಗಳ ಆಯ್ದ ವಿದ್ಯಾರ್ಥಿಗಳೊಂದಿಗೆ ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷಾ ಭಯ ನಿವಾರಣೆಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣದಿಂದ ಜ್ಞಾನ ಹೆಚ್ಚಾಗಲಿದ್ದು, ಇದು ನಿಮ್ಮಲಿರುವ ಸ್ಥೈರ್ಯ ಮತ್ತು ಧೈರ್ಯವನ್ನು ಹೆಚ್ಚಿಸುವುದರ ಜೊತೆ ಪ್ರತಿ ವ್ಯಕ್ತಿಯ ವಿಕಸನವನ್ನೂ ಹೆಚ್ಚಿಸುತ್ತದೆ. ಎಲ್ಲಾ ಮಕ್ಕಳಲ್ಲಿ ಅವರದ್ದೆ ಆದ ವಿಶೇಷ ಚೈತನ್ಯವಿದ್ದು, ಅದನ್ನು ಶಿಕ್ಷಕರು ಗುರುತಿಸುವ ಕಾರ್ಯ ಮಾಡುವುದರ ಜೊತೆ ವಿದ್ಯಾರ್ಥಿಗಳಲ್ಲಿನ ಕೊರತೆಯನ್ನು ಗುರುತಿಸಿ ಅದನ್ನು ಉತ್ತೇಜಿಸುವ ಕೆಲಸ ಶಿಕ್ಷಕರದ್ದಾಗಿದೆ ಎಂದರು. ಇತ್ತೀಚೆಗೆ ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದು ವಿಷಾದನೀಯ ಸಂಗತಿ. ಇದಕ್ಕೆ ಸರ್ಕಾರಗಳೇ ಕಾರಣ, ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಕರನ್ನು ಹೊಂದಿದ್ದರೂ ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಇದು ಕೂಡ ಕೆಲ ಪೋಷಕರ ಇಂಗ್ಲೀಷ್ ವ್ಯಾಮೋಹ ಮತ್ತು ಸಮಾಜದಲ್ಲಿ ತಮ್ಮ ಗತ್ತನ್ನು ತೋರ್ಪಡಿಕೆಯ ಸಲುವಾಗಿದೆ. ಇದಕ್ಕೆ ರಾಜ್ಯದಲ್ಲಿ ಮೊರಾರ್ಜಿ ಶಾಲೆಗಳು ಶೆಡ್ಡು ಹೊಡೆದು ಉತ್ತಮ ಫಲಿತಾಂಶ ನೀಡುವ ಮೂಲಕ ತನ್ನದೇ ಛಾಪು ಮೂಡಿಸಿವೆ ಎಂದರು.
ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಈ ಐದು ಪಂಚ ಮಂತ್ರಗಳಾದ ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತ್ಮವಿಶ್ವಾ, ನಿರ್ಭಯತೆಯನ್ನು ಗಮನದಲ್ಲಿಟ್ಟು ಕಲಿಯುವುದ ಜೊತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ತಮ್ಮ ತಲೆ, ಹೃದಯ, ಕೈಗಳನ್ನು ಸರಿಯಾಗಿ ಇಟ್ಟುಕೊಂಡಾಗ ಮಾತ್ರ ಜೀವನದ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಬರೀ ವಿದ್ಯೆ ಕಲಿತರೇ ಸಾಲದು, ಸಮಾಜದ ಏಳಿಗೆಗಾಗಿ ಅದನ್ನು ನೀಡಿದಾಗ ಮಾತ್ರ ನಿಮ್ಮ ಬದುಕಿಗೆ ಸಾರ್ಥಕತೆ ಬರುತ್ತದೆ ಎಂದರು.ವಿದ್ಯಾರ್ಥಿಗಳು ಪರೀಕ್ಷಾ ಸಮಯಗಳಲ್ಲಿ ಕಂಠಪಾಠ ಮಾಡದೆ, ಶಿಕ್ಷಕರು ಹೇಳಿದ ಪಾಠವನ್ನು ಏಕಾಗ್ರತೆಯಿಂದ ಆಲಿಸಿ ಮನಸ್ಸಿನಲ್ಲಿಟ್ಟುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರೊಟ್ಟಿಗೆ ಗುಂಪು ಅಧ್ಯಯನ ನಡೆಸಿದಾಗ ಅದು ನಿಮಗೆ ಅಚ್ಚಳಿಯದೆ ಉಳಿಯುತ್ತದೆ. ಆತ್ಮವಿಶ್ವಸದ ಬಗ್ಗೆ ನಂಬಿಕೆ ಇಟ್ಟು ಪರೀಕ್ಷೆ ಎದುರಿಸಿ, ಇಡೀ ದೇಶವೇ ಹಾಳಾಗಿರುವುದು ಇಂದಿನ ಮೊಬೈಲ್ ಹಾವಳಿಯಿಂದ, ಅದಕ್ಕಾಗಿ ನೀವು ಪುಸ್ತಕವನ್ನೇ ಸಂಗಾತಿಯನ್ನಾಗಿಸಿ ಕೊಂಡಾಗ ಮಾತ್ರ ನೀವು ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದರು.ಚಿಕ್ಕಮಗಳೂರು ಸರ್ಕಾರಿ ಅಭಿಯೋಜಕಿ ಭಾವನ ಮಾತನಾಡಿ, ಹುಟ್ಟಿನಿಂದಲೇ ನಮಗೆ ಸಂವಿಧಾನ ರಕ್ಷಣೆ ನೀಡುತ್ತದೆ. ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ದೇಶದಲ್ಲಿರುವ ಮಕ್ಕಳ ಹಕ್ಕು ಮತ್ತು ಕರ್ತವ್ಯಗಳ ಕಾನೂನುಗಳ ಬಗ್ಗೆ ತಿಳಿಯಿರಿ ಎಂದರು.ಯುವ ಸ್ಫೂರ್ತಿ ಅಕಾಡೆಮಿ ಅಧ್ಯಕ್ಷ ಸಿ.ಬಿ.ಸುಂದ್ರೇಶ್ ಮಾತನಾಡಿ, ಸಂಸ್ಥೆ 11 ವರ್ಷಗಳಿಂದ ಯುವಕರನ್ನು ವಿವಿಧ ತರಬೇತಿ ನೀಡುವ ಮೂಲಕ ಎಚ್ಚರಿಸುತ್ತಿದ್ದು, ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಕೆ.ಎಚ್.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಸದ್ಗುರು ಪೌಂಡೇಶನ್‌ನ ಅಧ್ಯಕ್ಷ ಡಾ.ಟಿ.ಎನ್.ಜಗದೀಶ್ ಮಾತನಾಡಿದರು.ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಬಿಸಿಎಂ ಅಧಿಕಾರಿ ದೇವರಾಜ್, ಬಿಇಒ ಚೋಪ್ದಾರ್ ಸೇರಿದಂತೆ ಶಾಲೆಯ ಶಿಕ್ಷಕರಾದ ಲತಾಸೀನಪ್ಪ, ಶ್ರೀಗಂಧ, ಕೆಂಚಪ್ಪ, ಕೆ.ಹೊನ್ನಪ್ಪ, ಅನಂತ ಕುಮಾರ್, ಶ್ರೀನಿವಾಸ್, ಉಷಾ, ಶಿಲ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಮೊರಾರ್ಜಿ ಶಾಲೆಯ ಶಿಕ್ಷಕರು ಆಯ್ದ ವಿದ್ಯಾರ್ಥಿಗಳು ಇದ್ದರು.
"ಯುವ ಪ್ರಜೆಳಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ "ಸಂವಾದಲ್ಲಿ ಪಾಲ್ಗೊಂಡಿದ್ದ 10ನೇ ವಿದ್ಯಾರ್ಥಿ ಲಾವಣ್ಯ, ಸಮಾಜದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದ್ದು, ಎಲ್ಲಿ ನೋಡಿದರು ಲಂಚ ಸ್ವೀಕಾರದ್ದೆ ಸುದ್ದಿ. ಇದು ಬಡವರಿಗೆ ಬರೆ ಹಾಕಿದಂತಾಗುತ್ತಿದೆ. ನ್ಯಾಯಾಂಗ ಇದರ ನಿರ್ಮೂಲನೆ ಮಾಡಲು ಸಾಧ್ಯವಿಲ್ಲವೇ ಎಂದು ನ್ಯಾಯಮೂರ್ತಿಗಳನ್ನು ಪ್ರಶ್ನಿಸಿದಳು ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು, ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿದ್ದು, ಇದನ್ನು ಯುವ ಪ್ರಜೆಗಳಾದ ನೀವು ತಮ್ಮ ಮನೆಗಳಲ್ಲಿ ಪ್ರಶ್ನಿಸುವ ಮೂಲಕ ಹತ್ತಿಕ್ಕಿದರೆ ಜೊತೆಗೆ ತಮ್ಮ ಪೋಷಕರ ಆದಾಯದ ಮೇಲೆ ಕಟ್ಟೆಚ್ಚರ ವಹಿಸಿದರೆ ಮಾತ್ರ ಸಾಧ್ಯವಾಗುತ್ತದೆ ಎಂದರು.ವಿದ್ಯಾರ್ಥಿ ಲಿಖಿತ್ ಮಾತನಾಡಿ, ಪೋಷಕರು ಬರಿ ಅಂಕಗಳಿಗೆ ಹೆಚ್ಚು ಒತ್ತು ನೀಡುತ್ತಾರೆ, ಆದರೆ ತಮ್ಮ ಮಕ್ಕಳ ಆಯ್ಕೆಯ ಬಗ್ಗೆ ಯೋಚಿಸುವುದಿಲ್ಲ ಇದರ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದನು.ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ಎಲ್ಲಾ ತಂದೆ- ತಾಯಿಗಳಿಗೆ ತಮ್ಮ ಮಕ್ಕಳು ಉತ್ತಮ ಅಂಕಪಡೆದು ಪಡೆದು ಸರ್ಕಾರಿ ನೌಕರಿ ಪಡೆದು ಉನ್ನತ ಸ್ಥಾನಕ್ಕೇರಬೇಕ್ಕುವ ಆಸೆ ಇರುತ್ತದೆ. ನೀವು ಯಾವುದರ ಬಗ್ಗೆ ಆಸಕ್ತಿ ಮತ್ತು ಸಾಧನೆ ಮಾಡುವ ವಿಷಯದ ಬಗ್ಗೆ ಮನದಟ್ಟಾಗುವಂತೆ ತಿಳಿಸಿದಾಗ ಅವರಿಗೂ ಅರ್ಥವಾಗುತ್ತದೆ ಎಂದರು.