ಶಿಕ್ಷಣ ಜಗತ್ತನ್ನು ಬದಲಾಯಿಸುವ ಮಹತ್ತರ ಅಸ್ತ್ರ

| Published : Sep 24 2024, 02:00 AM IST

ಶಿಕ್ಷಣ ಜಗತ್ತನ್ನು ಬದಲಾಯಿಸುವ ಮಹತ್ತರ ಅಸ್ತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು ವೃತ್ತಿ ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಅದು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ

ಮುಂಡರಗಿ: ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಮಹತ್ತರವಾದ ಅಸ್ತ್ರ. ಶಿಕ್ಷಣದಿಂದ ಮಾತ್ರ ಎಲ್ಲ ರೀತಿಯ ಅಭಿವೃದ್ಧಿಯಾಗಲಿದೆ ಎಂದು ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಪ್ರೊ.ಶಾಂತಮೂರ್ತಿ ಕುಲಕರ್ಣಿ ಹೇಳಿದರು.

ಅವರು ಭಾನುವಾರ ಮುಂಡರಗಿಯ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನದ ಮಕ್ಕಳ ಸ್ನೇಹಿ ಶಿಕ್ಷಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಶಿಕ್ಷಕ ವೃತ್ತಿಯನ್ನು ಅನುಭವಿಸುವುದೇ ಅಭಿನಂದನಾರ್ಹ. ಶಿಕ್ಷಕರು ವೃತ್ತಿ ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಅದು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಕಲಾವತಿ ಸೊಲಗಿ ಅಂತಹ ಎತ್ತರಕ್ಕೆ ಏರಿದ ಆದರ್ಶ ಶಿಕ್ಷಕಿ. ಅಂತಹ ಆದರ್ಶ ಶಿಕ್ಷಕಿಯ ಹೆಸರಿನಲ್ಲಿ ಕೊಡುವ ಈ ಪ್ರಶಸ್ತಿ ಅತ್ಯಂತ ಮಹತ್ವದ ಪ್ರಶಸ್ತಿಯಾಗಿದೆ.ಇದು ಇತರರಿಗೆ ಪ್ರೇರಣೆ ಕೊಡುವಂತಹ ಕಾರ್ಯಕ್ರಮವಾಗಿದೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸುವುದು ಅವಶ್ಯ. ಪ್ರತಿಭೆ ಗುರುತಿಸುವ ಸಣ್ಣ ಕಾರ್ಯ ಮಕ್ಕಳ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಹುದು. ಶಿಕ್ಷಕರ ಕಾರ್ಯ ಗಂಭೀರವಾದ ಕಾರ್ಯ. ಅದನ್ನು ಉತ್ತಮ ಹಾಗೂ ಪ್ರಾಮಾಣಿಕವಾಗಿ ನೆರವೇರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸಪಾಟೀಲ ಮಾತನಾಡಿ, ಒಂದು ಬ್ಯಾಂಕು ದಿವಾಳಿಯಾದರೆ ಆ ಬ್ಯಾಂಕನಲ್ಲಿ ವ್ಯವಹರಿಸುವ ಕೆಲವರಿಗೆ ಮಾತ್ರ ನಷ್ಠವಾಗುತ್ತದೆ. ಆದರೆ ಶಿಕ್ಷಕರು ಸರಿ ಇಲ್ಲದಿದ್ದರೆ ಇಡೀ ದೇಶವೇ ದಿವಾಳಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕ ವೃತ್ತಿಯು ಜಗತ್ತಿನ ಎಲ್ಲ ಉದ್ಯೋಗಗಳಲ್ಲಿ ಅತ್ಯಂತ ಶ್ರೇಷ್ಠವಾದ ಉದ್ಯೋಗವಾಗಿದೆ. ಶಿಕ್ಷಕರು ಕೇವಲ ಸಂಬಳಕ್ಕಾಗಿ ದುಡಿಯದೇ ಆ ವೃತ್ತಿ ಗೌರವದಿಂದ ಕಾಣಬೇಕು. ನಿರಂತರ ಅಧ್ಯಯನ ಮಾಡುವ ಮೂಲಕ ಆ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕಲಬುರಗಿಯ ರವೀಂದ್ರ ರುದ್ರವಾಡಿ, ಕೌಜಗೇರಿ ಗ್ರಾಮದ ನಾಗನಗೌಡ ಮೇಟಿ, ಸಿರಿಗೆರೆಯ ಲಕ್ಷ್ಮಿ ಎಸ್.ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ, ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಚೈತನ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ವೀಣಾ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ವಿಶ್ವಾಸ್ ಸೊಲಗಿ ಪ್ರಾಸ್ತಾವಿಕವಾಗಿ‌ ಮಾತನಾಡಿ, ಪ್ರತಿಷ್ಠಾನದ ಧ್ಯೇಯೋದ್ದೇಶ ಪರಿಚಯಿಸಿದರು. ಚೇತನ್ ಸೊಲಗಿ ಪ್ರಶಸ್ತಿ‌ ಪುರಸ್ಕೃತರನ್ನು ಪರಿಚಯಿಸಿದರು. ಹನಮರಡ್ಡಿ ಇಟಗಿ ನಿರೂಪಿಸಿ, ಲಿಂಗರಾಜ ಡಾವಣಗೇರಿ ವಂದಿಸಿದರು.