ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಉತ್ತಮ ಭವಿಷ್ಯಕ್ಕೆ ವಿದ್ಯೆ ಅತ್ಯಗತ್ಯ. ಶಿಕ್ಷಣ ರಂಗದಲ್ಲಿ ಹಾಗೂ ವ್ಯವಹಾರದಲ್ಲಿ ಸಮಯ ವ್ಯರ್ಥ ಮಾಡುವುದೆಂದರೆ, ನಿಮ್ಮ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತೆ. ಸಮಯ ಮತ್ತು ಏಕಾಗ್ರತೆಗೆ ಮಹತ್ವ ಕೊಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಸಂಗಮ್ಮ ಬಾಪುಗೌಡ ದರ್ಶನಾಪೂರ ಪಿಯು ಕಾಲೇಜಿನಲ್ಲಿ ನಡೆದ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಸೈನ್ಸ್ ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಈ ಭಾಗದಲ್ಲಿ ಶಿಕ್ಷಣ ಕಲಿಯುವವರ ಮತ್ತು ಶಿಕ್ಷಕರ ಸಂಖ್ಯೆ ಕಡಿಮೆ ಇತ್ತು. ಅದರಲ್ಲಿಯು ಮಹಿಳೆಯರು ಹೆಚ್ಚಿನ ಶಿಕ್ಷಣ ಕಲಿಯಲು ಅವಕಾಶಗಳು ಬಹಳ ಕಡಿಮೆ. ಆದರೆ, ಪುರುಷರಷ್ಟೇ ಮಹಿಳೆಯರಿಗೂ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಸರ್ಕಾರ ಕಲ್ಪಿಸಿಕೊಟ್ಟ ಪರಿಣಾಮ ಮಹಿಳೆಯರು ಶಿಕ್ಷಣದಲ್ಲಿ ಪುರುಷರಿಗಿಂತ ಒಂದು ಹೆಜ್ಜೆ ಮುಂಧಇದ್ದಾರೆ ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಕುಂಬಾರಗೇರಿಯ ಹಿರಿಯ ಮಠದ ಪೀಠಾಧಿಪತಿ ಸೂಗೂರೇಶ್ವರ ಮಹಾಸ್ವಾಮೀಜಿ, ಸಕಾರಾತ್ಮಕ ಚಿಂತನೆಯಿಂದ ಎಂತಹ ಸಮಸ್ಯೆಯನ್ನಾದರೂ ಎದುರಿಸಬಹುದು ಎಂಬ ಮನೋಸ್ಥೈರ್ಯ ಮತ್ತು ಸಂಸ್ಕಾರ ಶಿಕ್ಷಕರು ಮಕ್ಕಳಿಗೆ ಕಲಿಸಿಕೊಟ್ಟಾಗ ಮಾತ್ರ ಅವರ ಜೀವನ ಪರಿಪೂರ್ಣವಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ದರ್ಶನಾಪೂರ ಗ್ರೂಪ್ ನ ಕಾರ್ಯ ಶ್ಲಾಘನೀಯ ಎಂದರು.
ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಪ್ರೊ. ಡಾ. ದಯಾನಂದ್ ಸಾತಿಹಾಳ ಮಾತನಾಡಿ, ಹಿಂದುಳಿದ ಈ ಭಾಗದಲ್ಲಿ ದರ್ಶನಾಪೂರ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿನಿಯರಿಗೆ ಸಿಇಟಿ, ನೀಟ್, ಜೆಇಇ ವಿಶೇಷ ತರಬೇತಿ ನೀಡುವ ಮೂಲಕ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಮುನ್ನುಡಿ ಬರೆಯಲು ಹೊರಟಿರುವ ದರ್ಶನಾಪೂರ ಗ್ರೂಪ್ ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಗಮ್ಮ ಬಾಪುಗೌಡ ದರ್ಶನಾಪೂರ ಪಿಯು ಕಾಲೇಜಿನ ಅಧ್ಯಕ್ಷ ಡಾ. ಸುಧತ್ ದರ್ಶನಾಪೂರ, ಬೆಂಗಳೂರಿನ ಗುರುಕುಲ ಅಕಾಡೆಮಿಯ ಸಿಇಒ ಮುರಳಿಧರ ಮುಳ್ಳೂರ್, ಪ್ರಾಂಶುಪಾಲ ಡಾ. ಶಿವರಾಜ್, ತರಬೇತಿ ಸಂಸ್ಥೆಯ ಮುಖ್ಯಸ್ಥ ಡಾ. ಬಸವರಾಜ ಇಜೇರಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು. ಕವಿತಾ ಬಡಿಗೇರ್ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ಸ್ವಾಗತಿಸಿದರು.