ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಒಂದು ಮನೆ ಸುಲಲಿತವಾಗಿ ಸಾಗಬೇಕಾದರೆ ಆ ಮನೆಯ ಮೇಲೆ ಹೆಣ್ಣಿನ ಜವಾಬ್ದಾರಿ ಸಾಕಷ್ಟಿದೆ. ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ನಾಯಕತ್ವ ಗುಣ ಹೊಂದಿರುತ್ತಾಳೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದರು.ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ನಾಯಕತ್ವ ಗುಣ ಹೊಂದಿದ್ದರೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದರು.
ಸರಕಾರ ಮಹಿಳೆಗೆ ಮೀಸಲಾತಿ ನೀಡಿದರು ಕೂಡಾ ಅಧಿಕಾರದಲ್ಲಿ ಬೆರಳಣಿಕೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆ ಬಂದರು ಕೂಡಾ ಗಂಡ ಹಾಗೂ ಮಕ್ಕಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಇದಕ್ಕೆ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಇಂದಿನ ಸಮಾಜದಲ್ಲಿ ಮಹಿಳೆ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣ ಕಲಿತಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಅನ್ಯಾಯದ ವಿರುದ್ಧ ತಲೆ ಎತ್ತಲು ಮುಂದಾಗಬೇಕು. ಅಂದಾಗ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಲು ಸಾದ್ಯವಾಗುತ್ತದೆ ಎಂದು ಹೇಳಿದರು.ಮಹಿಳೆಯರಿಗೆ ಸಂವಿಧಾನದಲ್ಲಿ ಸಾಕಷ್ಟು ಹಕ್ಕುಗಳನ್ನು ಕೊಡಲಾಗಿದೆ. ಅವುಗಳನ್ನು ಪಡೆದುಕೊಳ್ಳದೇ ಹೊರತು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇದಕ್ಕೆ ಕಾಯ್ದೆಗಳ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಲ್ಲಿ ಮಹಿಳಾ ಕಾನೂನುಗಳ ಬಗ್ಗೆ ಅರಿವು ಮೂಡಿಸಲುವ ಕೆಲಸವಾಗಬೇಕು. ಧ್ವನಿ ಎತ್ತುವ ಕಾರ್ಯವಾಗಬೇಕು. ಅಂದಾಗ ಮಾತ್ರ ಮಹಿಳೆಯರು ಮುಂದೆ ಬರಲು ಸಾಧ್ಯವಾಗುತ್ತದೆ. ಕೃಷಿ, ಪಶು, ತೋಟಗಾರಿಕೆ ಸಖಿಯರು ಇದ್ದಾರೆ. ಅವರ ಮೂಲಕ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಮಹಿಳೆ ಏನನ್ನಾದರೂ ಸಾಧಿಸುತ್ತಾಳೆ ಎಂಬುವುದು ಇತಿಹಾಸದಲ್ಲಿ ಕೇಳಿದ್ದೇವೆ. ಮಹಿಳೆ ಮುಖ್ಯವಾಹಿನಿಗೆ ಬರಬೇಕಾದರೆ ಆರೋಗ್ಯ ಮತ್ತು ಶಿಕ್ಷಣ ಮುಖ್ಯವಾಗಿದೆ. ಯುವ ಪೀಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗಂಡಿಗೆ ಸಮಾನವಾಗಿ ಹೆಣ್ಣಿಗೂ ಶಿಕ್ಷಣ ಕೊಡಿಸಿದಲ್ಲಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಗಂಡಿಗಿಂತ ಹೆಣ್ಣು ಮಕ್ಕಳ ಸಾಕ್ಷರತ ಪ್ರಮಾಣದಲ್ಲಿ ಕಡಿಮೆ ಇದೆ. ಶೇ.86 ರಷ್ಟು ಪುರುಷರಿದ್ದರೆ, ಮಹಿಳೆಯರಲ್ಲಿ ಶೇ.68 ರಷ್ಟು ಸಾಕ್ಷರರಾಗಿದ್ದಾರೆ. ಸ್ವಾತಂತ್ರ್ಯ ಸಿಕ್ಕು 78 ವರ್ಷವಾದರೂ ಶಿಕ್ಷಣದಲ್ಲಿ ಮಹಿಳೆ ಹಿಂದುಳಿದಿದ್ದಾರೆ. ಶಿಕ್ಷಣ ಕೊಡುವಲ್ಲಿ ಗಂಡು ಹೆಣ್ಣು ಎಂಬ ಕೀಳರಿಮೆ ಹೋಗಲಾಡಬೇಕು. ಇಬ್ಬರಿಗೂ ಸಮಾನ ಶಿಕ್ಷಣ ಕೊಡಿಸಲು ಮುಂದಾದಲ್ಲಿ ಮಾತ್ರ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ, ಮಹಿಳೆಯರಿಗೆ ಇರುವ ಕಾನೂನಿನ ಅರಿವು ಅಗತ್ಯವಾಗಿದೆ. ಕಾನೂನನ್ನು ನೀವು ರಕ್ಷಿಸಿದರೆ, ನಿಮ್ಮನ್ನು ಕಾನೂನು ರಕ್ಷಿಸುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ವಕೀಲೆ ಅರುಣಾ ರಘುವೀರ ಮಹಿಳೆ ರಕ್ಷಣೆ, ಹಕ್ಕುಗಳ ಹಾಗೂ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ, ಡಾ.ರುದ್ರೇಶ್ ಪಿಸಿಪಿಎನ್ಡಿಟಿ ಕುರಿತು ಹಾಗೂ ಜಿಲ್ಲಾ ನಿರೂಪನಾಧಿಕಾರಿ ಅಮರೇಶ ಬಾಲ್ಯವಿವಾಹ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.