ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಯಾವುದೇ ಸಮುದಾಯ ಅಭಿವೃದ್ಧಿಯಾಗಲು, ಉತ್ತಮ ಬದುಕು ರೂಪಿಸಿಕೊಳ್ಳಲು ಶಿಕ್ಷಣವೊಂದೇ ದಾರಿ. ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಮುದಾಯದವರಿಗೆ ಸಲಹೆ ನೀಡಿದರು.ಲಂಬಾಣಿ(ಗೋರ್ ಬಂಜಾರ) ಅಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ತಾ.ಪಂ ಮುಂಭಾಗದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ರವರ 286 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿಶ್ರೀ ಸಂತ ಸೇವಲಾಲ್ ರವರ ತತ್ವ ಸಿದ್ದಾಂತಗಳನ್ನು ಹಾಗೂ ಅವರ ಮಾರ್ಗದರ್ಶನಗಳನ್ನು ಪ್ರತಿಯೊಬ್ಬರು ಪಾಲಿಸಲೇಬೇಕು. ಲಂಬಾಣಿ ಭಾಷೆ, ಸಂಸ್ಕೃತಿ ಆಚಾರ-ವಿಚಾರ ಉಡುಗೆ-ತೊಡುಗೆ ವೈಶಿಷ್ಟ್ಯತೆಯಿಂದ ಕೂಡಿದೆ. ಸಂತ ಸೇವಾಲಾಲ್ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಬಂಜಾರ, ಲಂಬಾಣಿ ಸಮಾಜಕ್ಕೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದ ಸರ್ಕಾರದ ಎಲ್ಲಾ ರೀತಿಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ತಾಂಡಾ ಕಂದಾಯ ಗ್ರಾಮವಾಗಲಿತಾ.ಪಂ ಮಾಜಿ ಸದಸ್ಯ ಹಾಗೂ ಸಮುದಾಯದ ಮುಖಂಡ ಶ್ರೀರಾಮ ನಾಯಕ್ ಮಾತನಾಡಿ ಬಂಜಾರ ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನ. ಬಂಜಾರ ತಾಂಡಗಳು ಶೇ 100 ರಷ್ಟು ಕಂದಾಯ ಗ್ರಾಮಗಳಾಗಬೇಕು. ತಾಂಡಗಳಿಗೆ ಕುಡಿಯುವ ನೀರು ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಲಕ್ಷ್ಮೀ ನರಸಿಂಹಪ್ಪ ಪುರಸಭೆ ಅದ್ಯಕ್ಷ ಎ.ಶ್ರೀನಿವಾಸ್, ಪುರಸಭೆ ಸದಸ್ಯರಾದ ಎ.ನಂಜುಂಡಪ್ಪ, ಕಾಂಗ್ರೆಸ್ ಮುಖಂಡ ಮಂಜುನಾಥ ರೆಡ್ಡಿ, ಶ್ರೀನಿವಾಸ್ ನಾಯಕ್, ಗೋಪಿ ನಾಯಕ್, ವಕೀಲರಾದ ಅನಂತ ನಾಯಕ್ ಮತ್ತಿತರರು ಇದ್ದರು.