ಇಲಾಖೆ ವತಿಯಿಂದ ಹೆಣ್ಣು ಮಕ್ಕಳ ಕಲ್ಯಾಣಕ್ಕೆ ವಸತಿ ಮತ್ತು ಊಟದ ಜೊತೆಗೆ ಅನೇಕ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು.

ಮಂಡ್ಯ: ಮಹಿಳೆಯರ ಸಬಲೀಕರಣಕ್ಕೆ ಮತ್ತು ಆರ್ಥಿಕ, ಸಾಮಾಜಿಕ , ವೈಯಕ್ತಿಕ ಸ್ವಾತಂತ್ರ್ಯಕ್ಕೆ ಶಿಕ್ಷಣವೊಂದೇ ಮಾರ್ಗ ಎಂದು ಕ್ರಿಯಾ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು ಅಭಿಪ್ರಾಯಪಟ್ಟರು.

ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕ್ರಿಯಾ ಸಂಸ್ಥೆ ವತಿಯಿಂದ ಸ್ತ್ರೀ ಅಭಿಯಾನದಡಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ‌ ಹೆಚ್ಚು ಹೆಣ್ಣು ಮಕ್ಕಳು ಶಾಲಾ- ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ‌ ನಿಲ್ಲಿಸಿ ಬಾಲ್ಯವಿವಾಹಕ್ಕೆ ಒಳಗಾಗುವುದು ಹಾಗೂ ಇದರೊಂದಿಗೆ ಹೆಣ್ಣು ಭ್ರೂಣ ಹತ್ಯೆಯಂತಹ ಅನಿಷ್ಠ ಪದ್ಧತಿಯೂ ಸೇರಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರಿಗೆ ಅತಿ ಹೆಚ್ಚು ಜವಾಬ್ದಾರಿ‌ ಇದೆ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಬೇಕಾದರೆ ಉತ್ತಮ ಉದ್ಯೋಗ ಪಡೆದುಕೊಳ್ಳುವುದು ಅತ್ಯವಶ್ಯಕ, ಆ ಹಿನ್ನೆಲೆಯಲ್ಲಿ ಕಠಿಣ ಶ್ರಮ ವಹಿಸಿ ಉತ್ತಮ ಜೀವನ ಮಾರ್ಗ ಕಂಡುಕೊಳ್ಳುವಂತೆ ಕರೆ‌ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಮಂಜುಳಾ ಮಾತನಾಡಿ, ಇಲಾಖೆ ವತಿಯಿಂದ ಹೆಣ್ಣು ಮಕ್ಕಳ ಕಲ್ಯಾಣಕ್ಕೆ ವಸತಿ ಮತ್ತು ಊಟದ ಜೊತೆಗೆ ಅನೇಕ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರಿಯಾ ಸಂಸ್ಥೆ ನಾನು ಸ್ತ್ರೀ ಘಟಕದ ಸಂಚಾಲಕಿ ಸುಪ್ರಿಯ ಶಿವಣ್ಣ, ತಾಲಾಖೆ ತಾಲೂಕು ಅಧಿಕಾರಿ ಮಂಜುನಾಥ ನಾಯ್ಡು, ನಿಲಯಪಾಲಕಿ ಯೋಗಿತಾ ಎಸ್, ಕ್ರಿಯಾ ಸಂಚಾಲಕರಾದ ಆನಂದ್ ಎಸ್.ಎಲ್,‌ ಲೋಕೇಶ್ ಕೆ.ಎನ್ ಮತ್ತು ನಿಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

-------------