ವೈಯಕ್ತಿಕ ಯಶಸ್ಸಿಗೂ ಶಿಕ್ಷಣ ಮೂಲ ಕಾರಣ: ಡಾ.ಚಂದ್ರಮೌಳಿ

| Published : Nov 08 2025, 02:45 AM IST

ಸಾರಾಂಶ

ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿಗಳ ಸಂಘ, ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ, ಶಾಲಾ ಆವರಣದಲ್ಲಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆಶಿಕ್ಷಣ ಎಂಬುದು ಮಾನವನ ಜೀವನದ ಮೂಲಧಾರವಾಗಿದ್ದು, ವೈಯುಕ್ತಿಕ ಯಶಸ್ಸಿಗೂ ಶಿಕ್ಷಣವೇ ಮೂಲ ಕಾರಣ ಎಂದು ದಾನಿ, ಅಮೇರಿಕಾ ನಿವಾಸಿ ಡಾ.ಚಂದ್ರಮೌಳಿ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿಗಳ ಸಂಘ, ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ, ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಶಿಕ್ಷಣದ ಪ್ರಭಾವದಿಂದ ಅಜ್ಞಾನ, ಅಂಧಶ್ರದ್ಧೆ, ಅಸಮಾನತೆ ಮುಂತಾದ ಅಪಸವ್ಯ ನಿವಾರಿಸಬಹುದು. ಪ್ರತಿಯೊಬ್ಬ ಪೋಷಕರು ಶಿಕ್ಷಣದ ಮಹತ್ವವನ್ನು ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಜವಾಬ್ದಾರಿ ಹೊರಬೇಕು.

ನಾವು ಸಂಪಾದಿಸಿದ ಹಣದಲ್ಲಿ ಶೇ.೧೦ರಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು. ಅನೇಕ ಸರ್ಕಾರಿ ಶಾಲೆಗಳು ದಾನಿಗಳ ಸಹಕಾರದಿಂದ ಅಭಿವೃದ್ದಿ ಹೊಂದುತ್ತಿವೆ. ಬೇಳೂರು ಶಾಲೆಯಲ್ಲಿ ಓದಿದ ಬಹುತೇಕ ಮಂದಿ ದೊಡ್ಡ ಹುದ್ದೆಯಲ್ಲಿದ್ದಾರೆ. ಎಲ್ಲರ ಸಹಕಾರ ಶಾಲೆಗಿರಲಿ ಎಂದು ಆಶಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ವಿದ್ಯೆ ನೀಡಿದ ಶಾಲೆ ಸ್ವರ್ಗಕ್ಕೆ ಸಮ ಎಂಬುದು ನಮ್ಮೆಲ್ಲರ ನಂಬಿಕೆ. ಸರ್ಕಾರಿ ಶಾಲೆಗಳ ನಮ್ಮೆಲ್ಲರ ಕಣ್ಣುಗಳಿದ್ದಂತೆ, ಅವುಗಳನ್ನು ಮುಚ್ಚುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.ಬೆಳಗ್ಗೆ ಶಾಲೆಯಲ್ಲಿ ಹೋಮ ಹವನಗಳು ನಡೆದವು. ೮.೩೦ಕ್ಕೆ ವಿದ್ಯಾರ್ಥಿಗಳ ವಾದ್ಯಗೋಷ್ಠಿಯೊಂದಿಗೆ ಮಹಿಳೆಯರ ಪೂರ್ಣಕುಂಭ ಮೆರವಣಿಗೆ ನಡೆಯಿತು. ಹಳೆ ವಿದ್ಯಾರ್ಥಿ ಕೆ.ಎ. ಭಾರತೀ ಜಯಕುಮಾರ್ ನಿರ್ಮಿಸಿಕೊಟ್ಟಿರುವ ಪ್ರವೇಶ ದ್ವಾರ ಉದ್ಘಾಟಿಸಲಾಯಿತು. ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಬೆಂಗಳೂರಿನ ಆರ್‌ವಿ ಆಸ್ಪತ್ರೆಯ ವೈದ್ಯರು ಮಕ್ಕಳು ಮತ್ತು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು. ದಾನಿಗಳನ್ನು ಸನ್ಮಾನಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಪ್ರಸಾದ್, ಶತಮನೋತ್ಸವ ಸಮಿತಿ ಅಧ್ಯಕ್ಷ ಜಿ.ಎಸ್. ಪ್ರಭುದೇವ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಪಿ. ಉಲ್ಲಾಸ್, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಸುದರ್ಶನ್, ಕುಸುಬೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಜೆ. ಗಿರೀಶ್, ಇನ್ನರ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಮತ್ತಿತರ ಗಣ್ಯರು ಇದ್ದರು.ಇಂದಿನ ಕಾರ್ಯಕ್ರಮ: ಶನಿವಾರ ಬೆಳಗ್ಗೆ ಗುರುವಂದನಾ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಸಾಧಕರಿಗೆ ಸನ್ಮಾನ ನಡೆಯಲಿದೆ. ಸಂಜೆ ೪ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸಚಿವರಾದ ಬಿ.ಎ. ಜೀವಿಜಯ, ಅಪ್ಪಚ್ಚು ರಂಜನ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.