ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ಪ್ರಬಲ ಅಸ್ತ್ರಗಳ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಸಮಾಜದಲ್ಲಿ ತಲೆದೋರಿದ ಅಸಮಾನತೆ ಧೋರಣೆಯನ್ನು ತೊಡೆದುಹಾಕಲು ಶ್ರಮಿಸಿದರು.
ಕನ್ನಡಪ್ರಭ ವಾರ್ತೆ ಮುಂಡಗೋಡ
ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ಪ್ರಬಲ ಅಸ್ತ್ರಗಳ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಸಮಾಜದಲ್ಲಿ ತಲೆದೋರಿದ ಅಸಮಾನತೆ ಧೋರಣೆಯನ್ನು ತೊಡೆದುಹಾಕಲು ಶ್ರಮಿಸಿದರು ಎಂದು ತಹಶೀಲ್ದಾರ ಶಂಕರ ಗೌಡಿ ಹೇಳಿದರು.ಇಲ್ಲಿನ ಪಪಂ ಟೌನ್ ಹಾಲ್‌ನಲ್ಲಿ ತಾಲೂಕು ಆಡಳಿತ, ತಾಪಂ, ಪಪಂ, ಸಮಾಜ ಕಲ್ಯಾಣ ಇಲಾಖೆ, ಪ.ಜಾತಿ/ಪ. ಪಂಗಡಗಳ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಂ ಅವರ ೧೧೯ನೇ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಅನೇಕ ಮಹಾನ್ ವ್ಯಕ್ತಿಗಳು ಬಂದು ಹೋಗಿದ್ದಾರೆ. ಭಗವಾನ್ ಬುದ್ಧ, ಜಗಜ್ಯೋತಿ ಬಸವೇಶ್ವರ, ಜ್ಯೋತಿಬಾ ಫುಲೆ ಹೀಗೆ ಹಲವರು ತಮ್ಮ ಅಮೂಲ್ಯ ಸೇವೆಯನ್ನು ಸಮಾಜಕ್ಕೆ ಸಲ್ಲಿಸಿದ್ದಾರೆ.ಡಾ. ಬಿ.ಆರ್.ಅಂಬೇಡ್ಕರ್ ಅಸಮಾನತೆ ವಿರುದ್ಧ ಅತ್ಯಂತ ಸಂಘಟಿತ ಮತ್ತು ವ್ಯವಸ್ಥಿತ ಹೋರಾಟ ಮಾಡಿದರು. ತಮ್ಮವರನ್ನು ಸಮಾನತೆಗೆ ಕೊಂಡೊಯ್ಯಲು ಶಿಕ್ಷಣವೇ ಪ್ರಬಲ ಅಸ್ತ್ರ ಎಂದು ಮನಗಂಡಿದ್ದರು. ಜ್ಞಾನದ ಮೂಲಕ ಮಹಾಪುರುಷ ಎನಿಸಿಕೊಂಡರು. ದೇವಸ್ಥಾನಗಳಿಗಿಂತ ಗ್ರಂಥಾಲಯದಲ್ಲಿ ಕ್ಯೂ ಹೆಚ್ಚಾಗಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಅಂಬೇಡ್ಕರ್ ಬಡತನದಲ್ಲಿ ಬೆಳೆದು ಬಂದವರು. ಕಾನೂನು ಮಂತ್ರಿಯಾಗಿ ಎಲ್ಲರಿಗೂ ಸಮಾನವಾದ ಸಂವಿಧಾನ ರಚಿಸಿದ್ದಾರೆ. ಡಾ. ಬಾಬು ಜಗಜೀವನರಾಂ ದೇಶಕ್ಕೆ ಹಸಿರು ಕ್ರಾಂತಿ ಒದಗಿಸಿಕೊಟ್ಟ ಮಹಾನ್ ಪುರುಷ. ಇಬ್ಬರೂ ಕೇವಲ ಒಂದು ವರ್ಗಕ್ಕೆ ಸೀಮಿತರಾದವರಲ್ಲ ಎಂದರು.ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್.ಫಕ್ಕೀರಪ್ಪ ಮಾತನಾಡಿ, ಅಂಬೇಡ್ಕರ್ ದೇಶ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಕಾನೂನು ಮಂತ್ರಿಯಾಗಿ ದೇಶಕ್ಕೆ ಬೇಕಾದ ಕಾನೂನುಗಳನ್ನು ರಚನೆ ಮಾಡಿದರು. ಡಾ.ಬಾಬುಜಗಜೀವನರಾಂ ಕೂಡ ಬಾಲ್ಯದಲ್ಲೇ ಜಾತಿ ವ್ಯವಸ್ಥೆ, ಅಸ್ಪ್ರಶ್ಯತೆ ಶೋಷಣೆಗೆ ಒಳಗಾದವರು. ೫೦ ವರ್ಷಗಳ ಕಾಲ ಸೋಲಿಲ್ಲದ ಸರದಾರ ಎನಿಸಿಕೊಂಡ ಮುತ್ಸದ್ದಿ ರಾಜಕಾರಣಿ ಎಂದರು.
ಸಾಹಿತಿ ಚಿದಾನಂದ ಪಾಟೀಲ ಉಪನ್ಯಾಸ ನೀಡಿದರು.ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಅಶೋಕ ಚಲವಾದಿ, ಸುರೇಶ ಕಳ್ಳೊಳ್ಳಿ ಮಾತನಾಡಿದರು. ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಸಂವಿಧಾನ ಪೀಠಿಕೆ ಓದಿದರು. ಇದೇ ಸಂದರ್ಭ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಸ್.ಸಿ. ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಮೆರವಣಿಗೆ:
ಇದಕ್ಕೂ ಮುನ್ನ ಪಟ್ಟಣದ ಗಾಂಧಿನಗರದಲ್ಲಿ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಡಾ. ಅಂಬೇಡ್ಕರ್ ಮತ್ತು ಡಾ.ಬಾಬುಜಗಜೀವನರಾಂ ಅವರ ಭಾವಚಿತ್ರಗಳನ್ನು ಹೊತ್ತ ಡೊಳ್ಳಿನ ಮೆರವಣಿಗೆ ಹೊರಟು ಅಂಬೇಡ್ಕರ್ ಸರ್ಕಲ್‌ನಲ್ಲಿ ಇರುವ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸುವ ಮೂಲಕ ಬಸವನಬೀದಿಯಿಂದ ಟೌನ್ ಹಾಲ್ ತಲುಪಿತು.ಈ ವೇಳೆ ತಾಪಂಇಒ ಟಿ.ವೈ. ದಾಸನಕೊಪ್ಪ, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಸಿಪಿಐ ರಂಗನಾಥ ನೀಲಮ್ಮನವರ, ಸಿಡಿಪಿಒ ಸಂಜೀವ ಸದಲಗಿ, ಸಣ್ಣ ನೀರಾವರಿ ಇಲಾಖೆ ಎಇಇ ಆರ್.ಎಂ. ದಫೇದಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ರಾಜೇಶ್ವರಿ ಕದಂ, ಪಿಡಬ್ಲ್ಯುಡಿ ಎಇಇ ಮಹದೇವಪ್ಪ ಹ್ಯಾಟಿ, ಸಮಾಜ ಕಲ್ಯಾಣ ಇಲಾಖೆಯ ಸಿದ್ದಯ್ಯನವರ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಸುಭಾಸ ಡೋರಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಜಿಲ್ಲಾ ಸಂಚಾಲಕ ಬಸವರಾಜ ಸಂಗಮೇಶ್ವರ, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಶಾರದಾ ರಾಠೋಡ, ಹನ್ಮಂತಪ್ಪ ಬಜಂತ್ರಿ, ರಮೇಶ ಅಂಬಿಗೇರ, ಎನ್.ಡಿ. ಕಿತ್ತೂರ, ಸಲ್ಮಾ ಕಿರಣ ಶೇರಖಾನೆ ಮುಂತಾದವರು ಇದ್ದರು. ಶಿಕ್ಷಕಿಯರು ನಾಡಗೀತೆ ಹೇಳಿ ಪ್ರಾರ್ಥಿಸಿದರು. ಬಿಇಒ ಸುಮಾ ಜಿ. ಸ್ವಾಗತಿಸಿದರು. ರಮೇಶ ಪವಾರ ನಿರೂಪಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶನಗೊಂಡಿತು.-----ಪೋಟೊ: ೧೪ಎಮ್.ಎನ್.ಡಿ೧- ಮುಂಡಗೋಡದ ಟೌನ್ ಹಾಲ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಾಬುಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಲಾಯಿತು.