ಸಂಸ್ಕಾರ ಇಲ್ಲದ ಶಿಕ್ಷಣ ಅರ್ಥಹೀನ: ಆರ್‌ಎಸ್‌ಎಸ್‌ ಮುಖಂಡ ನಾಗೇಶರೆಡ್ಡಿ

| Published : Jan 30 2024, 02:01 AM IST

ಸಂಸ್ಕಾರ ಇಲ್ಲದ ಶಿಕ್ಷಣ ಅರ್ಥಹೀನ: ಆರ್‌ಎಸ್‌ಎಸ್‌ ಮುಖಂಡ ನಾಗೇಶರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಸಮಾಜದ ಆಸ್ತಿ, ದೇಶದ ಭವಿಷ್ಯವಾಗಿ ಬೆಳಯಬೇಕಾದರೆ ಅವರಲ್ಲಿ ಮೌಲ್ಯ, ಆದರ್ಶ, ಸಂಸ್ಕಾರ ಬಿತ್ತಲು ಪ್ರಥಮಾಧ್ಯತೆ ನೀಡಬೇಕು. ಅಂಕಗಳಿಂದ ಉತ್ತಮ ಉದ್ಯೋಗ ಸಿಗಬಹುದು. ಆದರೆ ಸಂಸ್ಕಾರವಿಲ್ಲದವರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಬೀದರ್‌

ಶಿಕ್ಷಣದಿಂದ ಮಾತ್ರ ಸಮಾಜದ ಸರ್ವಾಂಗೀಣ ವಿಕಾಸ ಸಾಧ್ಯ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಕೊರತೆ ಕಾಣುತ್ತಿದೆ. ಇದನ್ನು ನಿವಾರಿಸುವ ಹೊಣೆ ಪಾಲಕರು ಹಾಗೂ ಶಿಕ್ಷಕರ ಮೇಲಿದೆ. ಸಂಸ್ಕಾರವಿಲ್ಲದ ವಿದ್ಯೆ ಮಕ್ಕಳ ಭವಿಷ್ಯ ರೂಪಿಸಲಾಗದು. ಈ ಸತ್ಯ ಪ್ರತಿಯೊಬ್ಬರೂ ಅರಿಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಪ್ರಾಂತ ಸದ್ಭಾವ ವಿಭಾಗದ ಪ್ರಮುಖರಾದ ನಾಗೇಶ ರೆಡ್ಡಿ ಕರೆ ನೀಡಿದರು.

ಅವರು ಇಲ್ಲಿನ ಹಳೇ ಆರ್‌ಟಿಒ ಕಚೇರಿ ಹತ್ತಿರದ ಸಾಯಿಶ್ರದ್ಧಾ ಟ್ರಸ್ಟ್ ಸಾಯಿಜ್ಞಾನ ಸಿಬಿಎಸ್‌ಇ ಪಬ್ಲಿಕ್‌ ಸ್ಕೂಲ್‌ ವಾರ್ಷಿಕೋತ್ಸವ ನಿಮಿತ್ತ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಉಮಂಗ್‌- 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಸಮಾಜದ ಆಸ್ತಿ, ದೇಶದ ಭವಿಷ್ಯವಾಗಿ ಬೆಳಯಬೇಕಾದರೆ ಅವರಲ್ಲಿ ಮೌಲ್ಯ, ಆದರ್ಶ, ಸಂಸ್ಕಾರ ಬಿತ್ತಲು ಪ್ರಥಮಾಧ್ಯತೆ ನೀಡಬೇಕು. ಅಂಕಗಳಿಂದ ಉತ್ತಮ ಉದ್ಯೋಗ ಸಿಗಬಹುದು. ಆದರೆ ಸಂಸ್ಕಾರವಿಲ್ಲದವರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿಲ್ಲ. ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸಾಯಿಜ್ಞಾನ ಶಾಲೆ ಅಧ್ಯಕ್ಷರಾದ ರಮೇಶ ಕುಲಕರ್ಣಿ ಅವರ ಕೊಡುಗೆ ಅಪಾರವಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಈ ಭಾಗದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶ್ರೇಯ ರಮೇಶ ಕುಲಕರ್ಣಿ ಅವರಿಗೆ ಸಲ್ಲುತ್ತದೆ. ಪಿಯುಸಿ ಗಣಿತದಲ್ಲಿ ಎರಡು ಬಾರಿ ಫೇಲಾದ ರಮೇಶ ಅವರು ಉದಾತ್ತ ಗುರಿ, ಛಲದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಣಿತ ಮತ್ತು ಮಾದರಿ ಗಣಿತ ಬೋಧಕರಾಗಿ ಹೊರ ಹೊಮ್ಮಿರುವುದು ವಿಶೇಷ. ಇವರ ಮೂರು ದಶಕದ ಶಿಕ್ಷಣ ಕ್ಷೇತ್ರದ ಸೇವೆ ಸಹಸ್ರಾರು ಮಕ್ಕಳ ವಿಶೇಷವಾಗಿ ಬಡ ಪ್ರತಿಭೆಗಳ ಬಾಳು ಬೆಳಗಿದೆ. ಇವರಲ್ಲಿ ಕಲಿತವರು ಯುಪಿಎಸ್‌ಸಿ ಪರೀಕ್ಷೆಯಲ್ಲೂ ಸಾಧನೆ ಮಾಡಿ ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು,

ಸಂಸ್ಥೆ ಅಧ್ಯಕ್ಷ ರಮೇಶ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಆರಂಭಿಸಿದ ಮಾತೆ ಮಾಣಿಕೇಶ್ವರಿ ಪಿಯುಸಿ ಕಾಲೇಜು ಕಲ್ಯಾಣ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಸಾಯಿಜ್ಞಾನ ಶಾಲೆಯಲ್ಲಿ ಸನಾತನ ಸಂಸ್ಕೃತಿ ಆಧಾರದಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ಪ್ರತಿ ವರ್ಷ ಹಲವು ಬಡ, ಪ್ರತಿಭಾನ್ವಿತರಿಗೆ ನಿಶುಲ್ಕ ಶಿಕ್ಷಣ ಒದಗಿಸಿ ಸಾಮಾಜಿಕ ಬದ್ಧತೆ ಮೆರೆಯಲಾಗುತ್ತಿದೆ ಎಂದರು.

ಸಂಸ್ಥೆಯ ಪ್ರಮುಖರಾದ ಸುರೇಶ ಕುಲಕರ್ಣಿ, ಆರತಿ ಕುಲಕರ್ಣಿ, ವೈಶಾಲಿ ಕುಲಕರ್ಣಿ ಇತರರಿದ್ದರು. ತನುಜಾ ಆಣದೂರಕರ್‌ ಮತ್ತು ಪರಂಜ್ಯೋತಸಿಂಗ್‌ ನಿರೂಪಿಸಿದರು.

ಒಂದನೇ ತರಗತಿಯಿಂದ ಹಿಡಿದು ಹತ್ತನೇ ತರಗತಿವರೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೀಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು. ದೇಶಭಕ್ತಿ ಗೀತೆ, ವಚನ ನೃತ್ಯ, ಗಣೇಶ ಸ್ತುತಿ, ದೇವಿ ಆರಾಧನೆ ಹೀಗೆ ಹಲವು ವೈವಿಧ್ಯಮಯ ನೃತ್ಯಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಅದ್ಭುತ ಕಲಾ ಪ್ರತಿಭೆ ಅನಾವರಣ ಮಾಡಿದರು. ಉಧೋ ಅಂಬೆ ಉಧೋ ಭಕ್ತಿಗೀತೆ ಎಲ್ಲರನ್ನೂ ಆಕರ್ಷಿಸಿತು.