ವೀರಶೈವ ಮಠಾಧೀಶರಿಂದಲೇ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ: ಡಾ.ವೀರಣ್ಣ ಚರಂತಿಮಠ

| Published : Mar 10 2024, 01:45 AM IST

ವೀರಶೈವ ಮಠಾಧೀಶರಿಂದಲೇ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬಾಗಲಕೋಟೆ ಜಿಲ್ಲಾ ಘಟಕದಿಂದ 2021-22 ಹಾಗೂ 2022-23ನೇ ಶೈಕ್ಷಣಿಕ ವರ್ಷಗಳಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ಜಿಲ್ಲೆಯ ವೀರಶೈವ-ಲಿಂಗಾಯತ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾಡಿಗೆ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಅಪಾರವಾಗಿದ್ದು, ವೀರಶೈವ ಲಿಂಗಾಯತ ಎಂದು ಹೆಮ್ಮೆಯಿಂದ ಹೇಳಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರು.ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಶನಿವಾರ ಬಿವಿವಿ ಸಂಘ ನೂತನ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬಾಗಲಕೋಟೆ ಜಿಲ್ಲಾ ಘಟಕದಿಂದ 2021-22 ಹಾಗೂ 2022-23ನೇ ಶೈಕ್ಷಣಿಕ ವರ್ಷಗಳಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ಜಿಲ್ಲೆಯ ವೀರಶೈವ-ಲಿಂಗಾಯತ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.

ಈ ನಾಡಿಗೆ ಮಠಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ತನ್ನದೆಯಾದ ಕೊಡುಗೆ ನೀಡಿರುವುದು ವೀರಶೈವ ಸಮಾಜ, ಇದು ಸಕಲರಿಗೂ ಲೇಸನ್ನು ಬಯಸುವ ಸಮುದಾಯವಾಗಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭೆ ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ, ನಾಡಿನಲ್ಲಿ ವೀರಶೈವ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದಿವೆ, ಅದರಲ್ಲೂ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ 28 ಇದ್ದ ಅಂಗಸಂಸ್ಥೆಗಳು ಈಗ 168 ಸಂಸ್ಥೆಗಳಾಗಿದ್ದು, ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕರ್ನಾಟಕದ ಏಳಿಗೆಗೆ ವೀರಶೈವ ಲಿಂಗಾಯತ ಸಮಾಜದ ಏಳಿಗೆ ಮುಖ್ಯ. ಇಂದು ಎಲ್ಲ ರಂಗದಲ್ಲೂ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ತೆಂಗಿನಮಠದ ಮಲ್ಲಿಕಾರ್ಜುನ ದೇವರು ಆಶೀರ್ವಚನ ನೀಡಿ, ಜೀವನದ ಮುನ್ನಡೆಗೆ ಶಿಕ್ಷಣ, ಸಂಸ್ಕಾರ ಅಗತ್ಯವಾಗಿದ್ದು, ಮಠಗಳು ಸಂಸ್ಕಾರ ನೀಡಿದರೆ, ಶಿಕ್ಷಣ ಸಂಸ್ಥೆಗಳು ಜ್ಞಾನ ನೀಡುತ್ತಿವೆ, ವೀರಶೈವ ಮಠಾಧೀಶರಿಂದಲೇ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ ಎಂದರು.

ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಭಗವತಿ ಪ್ರಸ್ತಾವಿಕ ಮಾತನಾಡಿದರು.

ವೇದಿಕೆ ಮೇಲೆ ಬಾಗಲಕೋಟೆ ತಾಲೂಕಾಧ್ಯಕ್ಷ ಚಂದ್ರಶೇಖರ ಶಟ್ಟರ, ಬದಾಮಿ ತಾಲೂಕಾಧ್ಯಕ್ಷ ಸಿ.ಎಸ್. ಕಾಜೆಟ್ಟಿ, ಹುನಗುಂದ ತಾಲೂಕಾಧ್ಯಕ್ಷ ಎಂ.ಎಸ್. ಮಠ, ಜಮಖಂಡಿ ತಾಲೂಕಾಧ್ಯಕ್ಷ ಮುತ್ತಣ್ಣ ಹಿಪ್ಪರಗಿ, ಮುಧೋಳ ತಾಲೂಕಾಧ್ಯಕ್ಷ ಎಸ್.ಆರ್. ಕಾಳಗಿ, ಬೀಳಗಿ ತಾಲೂಕಾಧ್ಯಕ್ಷ ನಿಂಗಣ್ಣ ಗೋಳಿಪಲ್ಲೆ, ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಕ್ಕುಪ್ಪಿ ಇದ್ದರು.

ನಿರ್ಮಲಾ ಲೂತಿಮಠ,ಶಿವಲೀಲಾ ಪಟ್ಟಣಶೆಟ್ಟಿ, ವಿಜಯಲಕ್ಷ್ಮೀ ಭದ್ರಶಟ್ಟಿ ಪ್ರಾರ್ಥಿಸಿದರು, ಡಾ. ಗೀತಾ ದಾನಶೆಟ್ಟಿ, ಬಸವರಾಜ ತಿಪಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಹಾನಗಲ್ಲ ಕುಮಾರೇಶ್ವರರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು.

ಪ್ರತಿಭಾ ಪುರಸ್ಕಾರ: ನಂತರ 2021-22 ಹಾಗೂ 2022-23 ನೇ ಶೈಕ್ಷಣಿಕ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ಜಿಲ್ಲೆಯ ವೀರಶೈವ-ಲಿಂಗಾಯತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.