ಸಾರಾಂಶ
ಮುನಿರಾಬಾದ್: ಸಮೀಪದ ಶಿವಪುರ ಗ್ರಾಮದ 500 ವರ್ಷ ಪುರಾತನ ಕಾಲದ ಪ್ರಸಿದ್ಧ ಮಾರ್ಕಂಡೇಶ್ವರ ಸ್ವಾಮಿಯ ರಥೋತ್ಸವವು ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು.ರಥೋತ್ಸವದಲ್ಲಿ ನಗರಗಡ್ಡೆ ಮಠದ ಶಾಂತಲಿಂಗೇಶ್ವರ ಶ್ರೀ, ಶಿವಪುರ ಗ್ರಾಪಂ ಅಧ್ಯಕ್ಷ ರವಿಕುಮಾರ ಚಲಸಾನಿ, ಉಪಾಧ್ಯಕ್ಷ ವೆಂಕಟೇಶ ಚೆನ್ನದಾಸರ, ದೇವಸ್ಥಾನದ ಅಡಳಿತ ಅಧಿಕಾರಿ ವಿಠ್ಠಲ್ ಚೌಗುಲೆ, ಕನ್ನಡಪ್ರಭದ ಜನರಲ್ ಮ್ಯಾನೇಜರ್ ಶ್ರೀನಿವಾಸ, ಊರಿನ ಹಿರಿಯರು ರಥೋತ್ಸವದಲ್ಲಿ ಭಾಗವಹಿಸಿದ್ದರು.ಜಾತ್ರೆ ನಿಮಿತ್ತ ಶನಿವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಮಾರ್ಕಂಡೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.ದೇವಸ್ಥಾನವನ್ನು ವಿಜಯನಗರ ಅರಸರ ಕಾಲದಲ್ಲಿ ಸ್ಥಾಪಿಸಲಾಯಿತು. ಇಷ್ಟು ದಿನ ದೇವಸ್ಥಾನವನ್ನು ಶಿವಪುರದ ಜನರು ನಿರ್ವಹಿಸುತ್ತಿದ್ದರು. ಈಗ ಕಂದಾಯ ಇಲಾಖೆಯವರು ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ. ತಹಶೀಲ್ದಾರ ದೇವಸ್ಥಾನದ ಅಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಇಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಭಕ್ತರು ಆಗ್ರಹಿಸಿದರು.ಹೃದಯವಂತಿಕೆ ಪ್ರದರ್ಶಿಸಿದ ಗ್ರಾಮಸ್ಥರು: ಶಿವಪುರ ಗ್ರಾಮವು ಆಂಜನೇಯ ಸ್ವಾಮಿಯ ಮಾತಾಶ್ರೀ ಅಂಜನಾದೇವಿ ಅವರ ತವರೂರು. ಇಲ್ಲಿ ಅಂಜನಾದೇವಿ ಮಾತೆಯ ದೇವಸ್ಥಾನವಿದೆ. ಇದು ವಿಶ್ವದ ಏಕೈಕ ದೇವಸ್ಥಾನ. ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ಅಂಜನಾದೇವಿ ದೇವಸ್ಥಾನ ನವೀಕರಿಸುವ ಮೂಲಕ ಹೃದಯವಂತಿಕೆ ಪ್ರದರ್ಶಿಸಿದ್ದಾರೆ.ಟೂರಿಸ್ಟ್ ಸರ್ಕ್ಯೂಟ್ ಗೆ ಆಗ್ರಹ: ಹುಲಿಗಿಯ ಹುಲಿಗೆಮ್ಮ ದೇವಸ್ಥಾನ, ಶಿವಪುರದ ಮಾರ್ಕಂಡೇಶ್ವರ ಸ್ವಾಮಿ, ಅಂಜನಾದೇವಿ ದೇವಸ್ಥಾನ, ಅಂಜನಾದ್ರಿ ಪರ್ವತವನ್ನು ಟೂರಿಸ್ಟ್ ಸರ್ಕ್ಯೂಟ್ ಮಾಡಬೇಕೆಂಬ ಕೂಗು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತವು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.