ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಬೆಂಗಳೂರಿನ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ಸಮುದ್ರದ ಮೂಲಕ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಕರಾವಳಿ ಕಡಲ ತೀರ ಹಾಗೂ ಕಡಲಿನಲ್ಲಿ ನಡೆವ ಚಲನವಲನಗಳ ಮೇಲೆ ಹೈ ಅಲರ್ಟ್ ಇರಿಸಲಾಗಿದೆ. ಕರಾವಳಿ ಕಾವಲು ಪಡೆಯ ಸುಮಾರು 13 ಬೋಟುಗಳಲ್ಲಿ 150ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.ಬಾಂಬ್ ಸ್ಫೋಟ ಆರೋಪಿ ಭಟ್ಕಳಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಸಮುದ್ರದ ಮೂಲಕ ಪರಾರಿಯಾಗಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಎನ್‌ಐಎ ಸೂಚನೆ ಮೇರೆಗೆ ಕರಾವಳಿ ಕಾವಲು ಪಡೆ ಮತ್ತು ಕೋಸ್ಟ್ ಗಾರ್ಡ್ ಹದ್ದುಗಣ್ಣು ಇರಿಸಿದೆ.ಶುಕ್ರವಾರದಿಂದಲೇ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 320 ಕಿ.ಮೀ. ಕಡಲತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಡಲ ತೀರದಲ್ಲಿ ಅಥವಾ ಕಡಲಿನಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇರಿಸಿ ತಪಾಸಣೆ ತೀವ್ರಗೊಳಿಸಲಾಗಿದೆ. ಮೀನುಗಾರಿಕೆ ಬೋಟುಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮೀನುಗಾರಿಕೆ ಬೋಟುಗಳೂ ಸೇರಿದಂತೆ ಸಮುದ್ರದಲ್ಲಿ ಸಂಚರಿಸುವ ಎಲ್ಲ ಬೋಟುಗಳನ್ನು ತಪಾಸಣೆ ನಡೆಸಲಾಗುತ್ತಿದೆ.
ಬಾಂಬ್ ಸ್ಫೋಟ ಆರೋಪಿ ತುಮಕೂರು, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಸಂಚರಿಸಿ ಕೊನೆಗೆ ಭಟ್ಕಳಕ್ಕೆ ತಲುಪಿರುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಬಿಗಿ ಕಣ್ಗಾವಲು ಇರಿಸಲಾಗಿದೆ.