ಭಕ್ತರ ಹರ್ಷೋದ್ಘಾರಗಳ ಮಧ್ಯೆ ಜರುಗಿದ ಲೋಕೇಶ್ವರನ ರಥೋತ್ಸವ

| Published : Mar 10 2024, 01:45 AM IST

ಭಕ್ತರ ಹರ್ಷೋದ್ಘಾರಗಳ ಮಧ್ಯೆ ಜರುಗಿದ ಲೋಕೇಶ್ವರನ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ ಪಟ್ಟಣದ ಪವಾಡದ ಪುರುಷ ಲೋಕೇಶ್ವರ ಜಾತ್ರೆಯ ನಿಮಿತ್ತ ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ಭಾನುವಾರ ಸಂಜೆ ಸಡಗರ, ಸಂಭ್ರಮದಿಂದ ಮಹಾರಥೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ಪವಾಡದ ಪುರುಷ ಲೋಕೇಶ್ವರ ಜಾತ್ರೆಯ ನಿಮಿತ್ತ ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ಭಾನುವಾರ ಸಂಜೆ ಸಡಗರ, ಸಂಭ್ರಮದಿಂದ ಮಹಾರಥೋತ್ಸವ ಜರುಗಿತು.

ಬೆಳಗ್ಗೆಯಿಂದ ಲೋಕೇಶ್ವರನಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಅಭೀಷೇಕ ಜರುಗಿದವು. ಭಕ್ತರು ತೆಂಗಿನಕಾಯಿ, ಬಾಳೆಹಣ್ಣು, ನೈವೇದ್ಯ ಅರ್ಪಿಸಿ ಲೋಕನಾಥನ ದರ್ಶನ ಪಡೆದರು. ರಥದ ಕಳಸವನ್ನು ಸಂಜೆ ದೇಸಾಯಿ ವಾಡೆಯಿಂದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆಯಲ್ಲಿ ಬಸವೇಶ್ವರ ವೃತ್ತದ ಮೂಲಕ ಲೋಕೇಶ್ವರ ದೇವಸ್ಥಾನಕ್ಕೆ ತರಲಾಯಿತು.

ರಥವನ್ನು ವಿವಿಧ ಬಣ್ಣ ಬಣ್ಣದ ಬಟ್ಟೆಗಳು, ರುದ್ರಾಕ್ಷಿ ಮಾಲೆ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. ರಥಕ್ಕೆ ಕಳಸದ ತುದಿಯಲ್ಲಿ ವರ್ಣಾಲಂಕಾರ ಧ್ವಜ ಕಟ್ಟಲಾಗಿತ್ತು. ಬಳಿಕ ನವರತ್ನ ಹಾಗೂ ಫಲಪುಷ್ಪಾಲಂಕಾರ, ಹೂವಿನಿಂದ ಕಂಗೊಳಿಸುವ ಶ್ರೀ ಲೋಕನಾಥ ವಿಗ್ರಹವನ್ನು ರಥದಲ್ಲಿರಿಸಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿ ಸಂಜೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಆವರಣದಿಂದ ಹೊರಟ ಮಹಾರಥೋತ್ಸವ ಕಿಕ್ಕಿರಿದು ಸೇರಿದ್ದ ಭಕ್ತ ಸಮೂಹದ ಮಧ್ಯೆ ಸಕಲ ವಾದ್ಯ ವೈಭವದೊಂದಿಗೆ ಸಾಗಿತು. ಭಕ್ತರು ಜೈಕಾರದೊಂದಿಗೆ ರಥ ಎಳೆದು ಪುನೀತರಾದರು. ರಥೋತ್ಸವ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿ ಮರಳಿ ದೇವಸ್ಥಾನಕ್ಕೆ ಬಂದು ಸೇರಿತು. ರಥೋತ್ಸವ ಮುಗಿದ ನಂತರವೂ ಭಕ್ತ ಸಮೂಹ ಸೇರಿತ್ತು. ಭಕ್ತರು ಶಸ್ತ್ರ ಹಾಕಿಕೊಳ್ಳುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಪುರವಂತರು ಶಸ್ತ್ರಗಳನ್ನು ಹಾಕಿಕೊಳ್ಳುವ ದೃಶ್ಯ ರೋಮಾಂಚನಗೊಳಿಸಿತು.

ರಥೋತ್ಸವದಲ್ಲಿ ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವಕ್ಕೂ ಮುಂಚೆ ನಂದಿಕೋಲ, ಝಾಂಜ್‌ ಪಥಕ್‌ ಸೇರಿ ಹಲವು ವಾದ್ಯಮೇಳಗಳು ಮೆರಗು ನೀಡಿದವು. ಜಾತ್ರೆಯ ನಿಮಿತ್ತ ದೇವಸ್ಥಾನವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾನಿಧ್ಯವನ್ನು ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕ ಮಹಾರುದ್ರಯ್ಯ ಸ್ವಾಮೀಜಿ ವಹಿಸಿದ್ದರು. ಸ್ಥಳೀಯ ಗಣ್ಯರಾದ ಲೋಕಣ್ಣ ಉದಪುಡಿ ಅವರ ಸಹಕಾರ, ಜಾತ್ರಾ ಕಮಿಟಿ ಅಧ್ಯಕ್ಷ ಕಿರಣರಾವ ದೇಸಾಯಿ ನೇತೃತ್ವದಲ್ಲಿ ರಥೋತ್ಸವ ನೆರವೇರಿತು. ಸಿಪಿಐ ಆರ್.ಆರ್. ಪಾಟೀಲ, ಠಾಣಾಧಿಕಾರಿಗಳಾದ ರಾಕೇಶ ಬಗಲಿ ಮತ್ತು ಎಂ.ಬಿ. ಮಠದ ಹಾಗೂ ಪೋಲಿಸ್ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಿದ್ದರು.

ರಥೋತ್ಸವದ ವೇಳೆ ಎಸ್‌.ಎನ್. ಹಿರೇಮಠ, ಎಂ.ಎ. ವಿರಕ್ತಮಠ, ಲೋಕಣ್ಣ ಕತ್ತಿ, ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಷಣ್ಮುಖಪ್ಪ ಕೋಲ್ಹಾರ, ಪ್ರಕಾಶ ಚುಳಕಿ, ಮಹಾವೀರ ಟೋಪಣ್ಣವರ, ಯಮನಪ್ಪ ಹೊರಟ್ಟಿ, ಆನಂದ ಹಿರೇಮಠ, ಗೋವಿಂದಪ್ಪ ಕೌಲಗಿ, ವಿರೇಶ ಪಂಚಕಟ್ಟಿಮಠ, ಮಾರುತಿ ರಂಗನ್ನವರ, ಪ್ರವೀಣ ಗಂಗಣ್ಣವರ, ಪ್ರಮೋದ ತೆಗ್ಗಿ, ಆನಂದ ಹವಳಖೋಡ, ವಿನೋದ ಗಂಗಣ್ಣವರ ಹಾಗೂ ಲೋಕೇಶ್ವರ ದೇವಸ್ಥಾನ ಅರ್ಚಕರು, ಲಕ್ಷಾನಟ್ಟಿ, ಅರಳಿಕಟ್ಟಿ, ಚೌಡಾಪುರ, ಜಾಲಿಕಟ್ಟಿ ವೆಂಕಟಾಪುರ, ಹೆಬ್ಬಾಳ, ಭಂಟನೂರ ಚಿಕ್ಕೂರ, ಚಿತ್ರಬಾನುಕೋಟಿ, ದಾದನಟ್ಟಿ ಹೊಸಕೊಟಿ, ವರ್ಚಗಲ್, ತಿಮ್ಮಪುರ, ಮುದ್ದಾಪುರ ಕಾಡರಕೊಪ್ಪ ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಲೋಕೇಶ್ವರ ಭಕ್ತರು ಇದ್ದರು.