ಪ್ರೊ.ಎಂ.ಮಾದಯ್ಯ ಅವರಿಂದ ಮೈವಿವಿಯಲ್ಲಿ ಶೈಕ್ಷಣಿಕ ಕ್ರಾಂತಿ: ಪ್ರೊ.ಎನ್.ಕೆ.ಲೋಕನಾಥ್ ಬಣ್ಣನೆ

| Published : May 24 2024, 12:52 AM IST

ಪ್ರೊ.ಎಂ.ಮಾದಯ್ಯ ಅವರಿಂದ ಮೈವಿವಿಯಲ್ಲಿ ಶೈಕ್ಷಣಿಕ ಕ್ರಾಂತಿ: ಪ್ರೊ.ಎನ್.ಕೆ.ಲೋಕನಾಥ್ ಬಣ್ಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಸ ಗಂಗೋತ್ರಿಯಲ್ಲಿ ಸೆನೆಟ್ ಭವನ, ಗಂಗೋತ್ರಿ ಗ್ಲೇಡ್ಸ್ ನಿರ್ಮಾಣಕ್ಕೆ ಮಾದಯ್ಯ ಅವರು ಕಾರಣ. ಅದೇ ರೀತಿ ಹಾಸನ, ಮಂಡ್ಯ ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಿ, ಈಗ ಅವು ವಿವಿಗಳಾಗಿವೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಕೂಡ ಅವರ ಕುಲಪತಿಯಾಗಿದ್ದ ಅವಧಿಯಲ್ಲಿಯೇ ಮೈಸೂರು ವಿವಿಯಿಂದ ಪ್ರತ್ಯೇಕವಾಗಿ ರಚನೆಯಾಯಿತು. ಆಗ ಪಿಎಚ್.ಡಿ ಮಾಡಲು ಎರಡು ಮಾದರಿ ಇರಲಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರೊ.ಎಂ.ಮಾದಯ್ಯ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ನಡೆಸಿದರು ಎಂದು ಮೈವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸ್ಮರಿಸಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಹಾಗೂ ಮೈವಿವಿ ಸ್ನಾತಕ ಗ್ರಂಥಾಲಯವು ಮಹಾರಾಜ ಕಾಲೇಜು ಸ್ನಾತಕ ಗ್ರಂಥಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಖಾಲಿ ಹುದ್ದೆಗಳ ನೇಮಕಾತಿ, ಶೈಕ್ಷಣಿಕ ಗುಣಮಟ್ಟದಲ್ಲಿ ಮಾದಯ್ಯನವರ ಕಾಲದಲ್ಲಿ ಕ್ರಾಂತಿಯೇ ಆಯಿತು. ಇದರಿಂದ ಮೈಸೂರು ವಿವಿಗೆ ಒಳ್ಳೆಯ ಹೆಸರು ಬಂದಿತು. ಮತ್ತೆ ಆ ದಿನಗಳು ಬರುವ ರೀತಿಯಲ್ಲಿ ಕೆಲಸ ಮಾಡಬೇಕಿದೆ. ನಾನು ಕೂಡ ಅವರ ಸಾಗಿದ ದಾರಿಯಲ್ಲಿ ಹೋಗಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಮಾನಸ ಗಂಗೋತ್ರಿಯಲ್ಲಿ ಸೆನೆಟ್ ಭವನ, ಗಂಗೋತ್ರಿ ಗ್ಲೇಡ್ಸ್ ನಿರ್ಮಾಣಕ್ಕೆ ಮಾದಯ್ಯ ಅವರು ಕಾರಣ. ಅದೇ ರೀತಿ ಹಾಸನ, ಮಂಡ್ಯ ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಿ, ಈಗ ಅವು ವಿವಿಗಳಾಗಿವೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಕೂಡ ಅವರ ಕುಲಪತಿಯಾಗಿದ್ದ ಅವಧಿಯಲ್ಲಿಯೇ ಮೈಸೂರು ವಿವಿಯಿಂದ ಪ್ರತ್ಯೇಕವಾಗಿ ರಚನೆಯಾಯಿತು ಎಂದರು.

ಆಗ ಪಿಎಚ್.ಡಿ ಮಾಡಲು ಎರಡು ಮಾದರಿ ಇರಲಿಲ್ಲ. ಉಪನ್ಯಾಸಕರಾಗಿದ್ದವರು ಕೂಡ ಪಿಎಚ್.ಡಿ ಮಾಡಬಹುದು ಎಂದು ಮಾದಯ್ಯ ಅವರ ಕಾಲದಲ್ಲಿ ನಿಯಮಾವಳಿ ರೂಪಿಸಿದ್ದರಿಂದ ಎರಡು ವರ್ಷ ಮುಂಚಿತವಾಗಿ ನಾನು ಪಿಎಚ್.ಡಿ ಮಾಡಲು ಸಾಧ್ಯವಾಯಿತು. ಅವತ್ತು ಆ ಅವಕಾಶ ಸಿಗದಿದ್ದಲ್ಲಿ ನಾನು ಬೇರೆ ಕ್ಷೇತ್ರಕ್ಕೆ ಹೋಗುತ್ತಿದ್ದೆ ಎಂದರು.

ಇಂದಿನ ವಿದ್ಯಾರ್ಥಿಗಳು ಪ್ರೊ.ಮಾದಯ್ಯ ಅವರನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡಬೇಕು. ಹಳ್ಳಿಯಲ್ಲಿ ಹುಟ್ಟಿದ ಅವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು ಹೇಗೆ? ಎಂಬುದನ್ನು ಅರಿಯಬೇಕು ಎಂದರು.

ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ನನಗೆ ಪ್ರೊ.ಮಾದಯ್ಯ ಅವರು ಚಿಕ್ಕಂದಿನಿಂದಲೂ ಗೊತ್ತಿತ್ತು. ನಮ್ಮ ತಂದೆ ಕೂಡ ಸಹಾಯಕ ಗ್ರಂಥಾಪಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರ ನಿಧನಾನಂತರ ಪ್ರೊ.ಮಾದಯ್ಯ ಅವರು ನನಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಿದರು. ಇವತ್ತು ಕೂಡ ನಮ್ಮ ತಾಯಿಗೆ ವಿವಿಯಿಂದ ಪಿಂಚಣಿ ಬರುತ್ತಿದೆ. ಹೀಗಾಗಿ ನಾವು ಮೈಸೂರು ವಿವಿಯ ಋಣದಲ್ಲಿದ್ದೇವೆ ಎಂದರು.

ನಾನು ಶಾಸಕನಾಗಿ ಆಯ್ಕೆಯಾದಾಗ ನಮ್ಮ ಮನೆಗ ಪ್ರೊ.ಮಾದಯ್ಯ ಅವರು ಮನೆಗೆ ಬಂದು ಆಶೀರ್ವಾದ ಮಾಡಿ, ಒಳ್ಳೆಯ ಕೆಲಸ ಮಾಡು ಎಂದು ಹರಸಿದರು. ಇದು ನನ್ನ ಸೌಭಾಗ್ಯ ಎಂದು ಅವರು ಹೇಳಿದರು.

ನನ್ನ ಪ್ರಕಾರ ಮೈಸೂರು ವಿವಿಯನ್ನು ಕುವೆಂಪು ಕಟ್ಟಿದರು. ದೇಜಗೌ ಬೆಳೆಸಿದರು. ಆನಂತರ ಶೈಕ್ಷಣಿಕವಾಗಿ ಎತ್ತರಕ್ಕೆ ತೆಗೆದುಕೊಂಡು ಹೋದವರು ಮಾದಯ್ಯನವರು. ಎಲ್ಲೆಲ್ಲೋ ಇದ್ದ ಮೈಸೂರು ವಿವಿಯ ಆಸ್ತಿಯನ್ನು ರಕ್ಷಿಸಿದರು ಎಂದರು.

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾದಾಗ ಪ್ರೊ.ಮಾದಯ್ಯ ಅವರು ಕರೆ ಮಾಡಿ, ಶೈಕ್ಷಣಿಕವಾಗಿ ಮೈಸೂರು ವಿವಿ ಹಾಗೂ ಮೈಸೂರು ಅಭಿವೃದ್ಧಿಗೆ ಕೆಲಸ ಮಾಡುವಂತೆ ಸಲಹೆ ಮಾಡಿದರು. ಅವರು ಯಾವಾಗಲೂ ಶೈಕ್ಷಣಿಕವಾಗಿಯೇ ಆಲೋಚಿಸುತ್ತಿದ್ದರು. ಮಾದಯ್ಯ ಅವರು ತಮ್ಮ ಅಧಿಕಾರವಧಿಯಲ್ಲಿ ಬಸವಣ್ಣನವರಂತೆ ಎಲ್ಲರನ್ನು ಸಮನಾಗಿ ಕಂಡು ಕೆಲಸ ಮಾಡಿದ್ದಾರೆ ಎಂದರು.

ಮಾದಯ್ಯ ಅವರ ಪತ್ನಿ, ದಾವಣಗೆರೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಇಂದುಮತಿ ಮಾತನಾಡಿ, ನನ್ನ ಬೆಳವಣಿಗೆಗೆ ಪತಿಯೇ ಕಾರಣ. ಅವರಿಂದಾಗಿಯೇ ನಾನು ಈ ಮಟ್ಟಕ್ಕೆ ತಲುಪಲು ಸಾಧ್ಯವಾಯಿತು ಎಂದು ಭಾವುಕರಾದರು.

ನನಗೆ ಎರಡು ವರ್ಷ ಮುಂಚಿತವಾಗಿಯೇ ಕುಲಪತಿಯಾಗುವ ಅವಕಾಶವಿತ್ತು. ಆದರೆ ಪತಿಯವರು ಒಪ್ಪಲಿಲ್ಲ. ಆಕೆಗೆ ಇನ್ನಷ್ಟು ಅನುಭವವಾಗಲಿ ಎಂದು ಹೇಳಿದ್ದರು. ಅಂದಿನ ಪ್ರಧಾನಿ ಡಾ.ಮನಮೋಹನಸಿಂಗ್ ಅವರ ಆಪ್ತ ಸ್ನೇಹಿತರಾಗಿದ್ದು, ಮನಸ್ಸು ಮಾಡಿದ್ದರೆ ಕೇಂದ್ರೀಯ ವಿವಿಗೆ ಕುಲಪತಿ ಮಾಡಬಹುದಿತ್ತು. ಆದರೆ ಅವರು ಯಾವತ್ತೂ ಪ್ರಧಾನಿ ಕಾರ್ಯಾಲಯವನ್ನು ದುರುಪಯೋಗ ಮಾಡಿಕೊಳ್ಳಲಿಲ್ಲ ಎಂದರು.

ಗಾಂಧಿ ಭವನ ಹಾಗೂ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಪ್ರೊ.ಮಾದಯ್ಯ ಅವರ ಅಧಿಕಾರವಧಿಯಲ್ಲಿ ಇಡೀ ದಕ್ಷಿಣ ಭಾರತದಲ್ಲಿಯೇ ಯಾವುದೇ ಬ್ಲಾಕ್ ಲಾಗ್ ಹುದ್ದೆಗಳು ಖಾಲಿ ಇಲ್ಲದಂತೆ ಭರ್ತಿ ಮಾಡಿದ ಮೊದಲಿಗರು ಎನಿಸಿದರು. ಆ ಮೂಲಕ ಶೋಷಿತರಿಗೆ ನ್ಯಾಯ ಒದಗಿಸಿದರು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮೈಸೂರು ವಿವಿ ಅಮೃತ ಮಹೋತ್ಸವದಲ್ಲಿ ಡಾ.ಮನಮೋಹನ ಸಿಂಗ್ ಭಾಗಿಯಾಗಿದ್ದರು. ಇದಕ್ಕೆ ಪ್ರೊ.ಮಾದಯ್ಯ ಅವರ ಸ್ನೇಹವೇ ಕಾರಣ ಎಂದರು.

ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಕೆ. ಮಹೇಶ್ ಮಾತನಾಡಿ, ಮಾದಯ್ಯನವರು ವಿದ್ಯಾರ್ಥಿಗಳಿಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ನಾವೆಲ್ಲಾ ನೇಮಕವಾಗಲು ಅವರೇ ಕಾರಣ ಎಂದರು.

ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಮಹದೇವಮೂರ್ತಿ, ವಿಶ್ವಮಾನವ ನೌಕರರ ವೇದಿಕೆ ಅಧ್ಯಕ್ಷ ಬಿ. ವಾಸುದೇವ ಮೊದಲಾದವರು ಇದ್ದರು. ಸ್ನಾತಕ ಗ್ರಂಥಾಲಯದ ಗ್ರಂಥಪಾಲಕ ವೈ.ಎಲ್. ಸೋಮಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ತಾಂತ್ರಿಕ ಸಹಾಯಕ ಅರುಣ್ ಸ್ವಾಗತಿಸಿ, ನಿರೂಪಿಸಿದರು. ಕವಿತಾ ವಂದಿಸಿದರು. ವಿವಿಯ ವಿದ್ಯಾರ್ಥಿಗಳು, ಸಂಶೋಧಕರು ಭಾಗವಹಿಸಿದ್ದರು.