ಸಾರಾಂಶ
ಗದಗ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಿ ಮಾಡಬೇಕು. ನಿಗದಿಪಡಿಸಿದ ಗುರಿಗೂ ಅಧಿಕ ಸಾಧನೆ ಇಲಾಖೆ ಅಧಿಕಾರಿಗಳಿಂದ ನಿರೀಕ್ಷಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಹೇಳಿದರು.
ಅವರು ಗುರುವಾರ ನಗರದ ಜಿಲ್ಲಾಡಳಿತ ಭವನದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಕಾಮಗಾರಿ ಕೈಗೊಳ್ಳಲು ಸಾಕಷ್ಟು ಅವಕಾಶ ಒದಗಿಸಲಾಗಿದೆ. ಜಿಲ್ಲೆಯ ರೈತರಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ಇರುವ ರಿಯಾಯಿತಿ ಸೌಲಭ್ಯಗಳನ್ನು ಹಾಗೂ ಸಹಾಯಧನವನ್ನು ಸರಿಯಾಗಿ ತಲುಪಿಸಬೇಕು. ನರೇಗಾ ಯೋಜನೆಯಡಿ ತೋಟಗಾರಿಕೆ ಮಾಡುವವರಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರನ್ನು ಸ್ವಾವಲಂಬಿಗಳಾಗಿಸುವಲ್ಲಿ ಇಲಾಖೆಯ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.ಅದೇ ತರಹ ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳೂ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡದೇ ಗುರಿಗೂ ಅಧಿಕ ಸಾಧನೆ ಮಾಡುವಂತೆ ಸೂಚಿಸಿದ ಅವರು, ನರೇಗಾ ಕಾಮಗಾರಿಗಳನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಂಡು ದುಡಿಯುವ ಕೈಗಳಿಗೆ ಕೆಲಸ ನೀಡಿ ಕಾರ್ಮಿಕ ವರ್ಗದ ಆರ್ಥಿಕಾಭಿವೃದ್ಧಿ ಸಾಧಿಸುವುದರೊಂದಿಗೆ ಸ್ವಯಂ ಉದ್ಯೋಗಕ್ಕೂ ಇಲಾಖೆಯ ಯೋಜನೆಗಳು ಪೂರಕವಾಗಿವೆ. ಅವುಗಳನ್ನು ಅರ್ಹರೆಲ್ಲರಿಗೂ ತಲುಪಿಸುವ ಕಾರ್ಯ ಇಲಾಖಾ ಅಧಿಕಾರಿಗಳ ಕರ್ತವ್ಯ ಎಂದರು.
ಜಿಲ್ಲಾ ಪಂಚಾಯಿತಿಯೊಂದಿಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಕ್ರಿಯಾ ಯೋಜನೆ ತಯಾರಿಯಿಂದ ಹಿಡಿದು ಕಾಮಗಾರಿ ಅನುಷ್ಠಾನದ ವರೆಗೂ ಒಟ್ಟುಗೂಡಿ ಕೆಲಸ ನಿರ್ವಹಿಸಬೇಕು. ವಿನಾಕಾರಣ ಬೇರೆ ಇಲಾಖೆಗಳನ್ನು ದೂಷಿಸದೇ ಸಮನ್ವಯದಿಂದ ಕೆಲಸ ನಿರ್ವಹಿಸುವಲ್ಲಿ ಆದ್ಯತೆ ವಹಿಸಬೇಕು ಎಂದರು.ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರಿಗೆ ಬಿತ್ತನೆಗೆ ಅಗತ್ಯವಿರುವ ರಸಗೊಬ್ಬರ, ಬೀಜಗಳನ್ನು ಸಮರ್ಪಕವಾಗಿ ಪೂರೈಕೆ ಮಾಡುವಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು. ಅದೇ ತರಹ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿಯೂ ಆಸಕ್ತಿಯಿಂದ ಕೆಲಸ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟೆಮನಿ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.