ಸಂಘದಲ್ಲಿ ಈವರೆಗೆ ನೂರಾರು ಹಿರಿಯರು ಸದಸ್ಯತ್ವ ಪಡೆದುಕೊಂಡಿದ್ದು, ಅವರಿಗೆ ಸಂಘದ ವತಿಯಿಂದ ಗುರುತಿನ ಚೀಟಿ ವಿತರಿಸಲಾಗಿದೆ.

ಲಕ್ಷ್ಮೇಶ್ವರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಿರಿಯ ನಾಗರಿಕರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಹಿರಿಯ ನಾಗರಿಕರ ಸಂಘ ಎಲ್ಲ ಪ್ರಯತ್ನ ಮಾಡುತ್ತಿದೆ’ ಎಂದು ಲಕ್ಷ್ಮೇಶ್ವರ ತಾಲೂಕು ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ತಿಳಿಸಿದರು.

ಪಟ್ಟಣದ ಬಾಳಿಕಾಯಿ ಅವರ ಜೀನಿನ ಆವರಣದಲ್ಲಿ ಗುರುವಾರ ಜರುಗಿದ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿ, ಸಂಘದಲ್ಲಿ ಈವರೆಗೆ ನೂರಾರು ಹಿರಿಯರು ಸದಸ್ಯತ್ವ ಪಡೆದುಕೊಂಡಿದ್ದು, ಅವರಿಗೆ ಸಂಘದ ವತಿಯಿಂದ ಗುರುತಿನ ಚೀಟಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳು ಅನುಷ್ಠಾನಕ್ಕೆ ಬರಲಿದ್ದು, ಅವುಗಳ ಸೌಲಭ್ಯ ಪಡೆದುಕೊಳ್ಳಲು ಸಹಕಾರ ನೀಡಲಾಗುವುದು ಎಂದರು.

ಕಳೆದ ಮೂರು ತಿಂಗಳಿಂದ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಬರಬೇಕಾದ ಪಿಂಚಣಿ ಹಣ ಬಂದಿಲ್ಲ. ಕಾರಣ ಹಣ ಬಾರದವರು ಸಂಘಕ್ಕೆ ಅರ್ಜಿ ಕೊಡಬೇಕು ಎಂದರು.

ಈ ವೇಳೆ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಸವದತ್ತಿ ಮಾತನಾಡಿ, ಒಗ್ಗಟ್ಟಿನಲ್ಲಿ ಬಲ ಇದೆ ಎಂಬುದನ್ನು ಯಾರೂ ಮರೆಯಬಾರದು. ಎಲ್ಲರೂ ಒಂದಾಗಿದ್ದರೆ ಯಾವುದೇ ಕೆಲಸವನ್ನಾದರೂ ಸಾಧಿಸಲು ಸಾಧ್ಯ ಎಂದ ಅವರು, ಸಂಘದ ಚಟುವಟಿಕೆಗಳನ್ನು ನಡೆಸಲು ಸ್ಥಳದ ಅಗತ್ಯ ಇದ್ದು ಪುರಸಭೆ ಸ್ಥಳ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ನಿವೃತ್ತ ಉಪನ್ಯಾಸಕಿ ಸುವರ್ಣ ಹಿರೇಮಠ ಮಾತನಾಡಿ, ಹಿರಿಯ ನಾಗರಿಕರು ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುವುದನ್ನು ಕಲಿಯಬೇಕು. ವಯಸ್ಸಾದ ಮೇಲೆ ಬೇರೆಯವರ ಆಶ್ರಯ ಬೇಕೇ ಬೇಕು ಎಂಬುದನ್ನು ಮರೆಯಬಾರದು ಎಂದರು.

ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಅಳಗವಾಡಿ ಮಾತನಾಡಿದರು. ಐ.ಎಸ್. ಮಡಿವಾಳರ, ನಿವೃತ್ತ ಶಿಕ್ಷಕ ಎಲ್.ಆರ್. ಮಲ್ಲಸಮುದ್ರ, ಪವಾಡಶೆಟ್ರ, ಚನ್ನಪ್ಪ ಕೋಲಕಾರ, ವಾಲಿಶೆಟ್ಟರ, ಡಾ. ಎಸ್.ಜಿ. ಹೂವಿನ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಜೂನ್ ತಿಂಗಳಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಹಿರಿಯರ ಜನ್ಮ ದಿನದ ಅಂಗವಾಗಿ ಕೇಕ್ ಕತ್ತರಿಸಲಾಯಿತು.