ಸಾರಾಂಶ
ಹೊಸಪೇಟೆ ಭಾಗದಲ್ಲಿ ಸ್ಥಾಪನೆಗೆ ಹೋರಾಟ, ರಾಜಕೀಯ ವಲಯದಲ್ಲೂ ಕುತೂಹಲ
ಕೃಷ್ಣ ಲಮಾಣಿಕನ್ನಡಪ್ರಭ ವಾರ್ತೆ ಹೊಸಪೇಟೆ
ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಬಗ್ಗೆ ಕೂಗು ಎದ್ದಿರುವ ಬೆನ್ನಲ್ಲೇ ಈಗ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆಂಚಿನಬಂಡಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮೆ. ಕರ್ನಾಟಕ ಬಂಗಾರು ಶುಗರ್ಸ್ (ಕೆಬಿಎಸ್) ಪ್ರೈ.ಲಿ. ಮುಂದಾಗಿದೆ. ಈಗ ಇದಕ್ಕೆ ಸಕ್ಕರೆ ಸಚಿವರು ಅನುಮೋದನೆಯೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿಗಳು ಕಾರ್ಖಾನೆಗಳ ಅಂತರ ಪ್ರಮಾಣಪತ್ರ ನೀಡಬೇಕಿದೆ.ಮೆ. ಕರ್ನಾಟಕ ಬಂಗಾರು ಶುಗರ್ಸ್ ಪ್ರೈ.ಲಿ.ನವರು 2024ರ ಫೆ. 22 ಮತ್ತು 2024ರ ಮೇ 20ರಂದು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕಬ್ಬು ನಿಯಂತ್ರಣ (ತಿದ್ದುಪಡಿ) ಆದೇಶ-2006ರಂತೆ ಅಂತರ ಪ್ರಮಾಣಪತ್ರವನ್ನು ಸರ್ವೆ ಆಫ್ ಇಂಡಿಯಾದಿಂದ ಪಡೆಯಬೇಕಾಗುತ್ತದೆ. ಇದರನ್ವಯ ಸಕ್ಕರೆ ಕಾರ್ಖಾನೆ ಪಿಲ್ಲರ್ ಪಾಯಿಂಟ್ ಸ್ಥಳ, ಸ್ಕೆಚ್ ಮತ್ತು ಅಂತರ ಇರುವ ಬಗ್ಗೆ ಜಿಲ್ಲಾಧಿಕಾರಿ ಅವರಿಂದ 2024ರ ಆಗಸ್ಟ್ 17ರಂದು ವರದಿ ಕೇಳಲಾಗಿತ್ತು. ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆಯ ಎಇಇ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆಂಚಿನಬಂಡಿ ಗ್ರಾಮದ ಸರ್ವೆ ನಂಬರ್ 195/ಎ2ರ ಜಮೀನಿನಲ್ಲಿ ಸಿಮೆಂಟ್ ಕಾಂಕ್ರಿಟ್ ಪಿಲ್ಲರ್ ನಿರ್ಮಾಣದ ದೃಢೀಕೃತ ನಕಾಶೆಯೊಂದಿಗೆ 2024ರ ನ. 5ರಂದು ವರದಿ ಸಲ್ಲಿಸಿದ್ದಾರೆ. ವಿಜಯನಗರ ಜಿಲ್ಲಾಧಿಕಾರಿ ನೀಡಿದ ವರದಿ ಆಧಾರದ ಮೇಲೆ ಉದ್ದೇಶಿತ ಸಕ್ಕರೆ ಕಾರ್ಖಾನೆಗೆ ಅಂತರ ಪ್ರಮಾಣಪತ್ರಕ್ಕಾಗಿ 2025ರ ಜ. 17ರಂದು ಸರ್ವೆ ಆಫ್ ಇಂಡಿಯಾಕ್ಕೆ ಪತ್ರ ಬರೆಯಲಾಗಿತ್ತು. ಈಗ ಅಂತರ ಪ್ರಮಾಣಪತ್ರ ನೀಡಿದ್ದಾರೆ.
ಸರ್ಕಾರದ ಉಲ್ಲೇಖ (2)ರ ಅಧಿಸೂಚನೆಯಂತೆ ಕಬ್ಬು ನಿಯಂತ್ರಣ ಆದೇಶ, 1966ರ ಕಂಡಿಕೆ6-ಬಿ (1)ರಡಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಎಂಎಸ್‌ಎಂಇ ಮತ್ತು ಗಣಿ) ಕಾರ್ಯದರ್ಶಿಯನ್ನು ಸಕ್ಕರೆ ಕಾರ್ಖಾನೆಗಳ ನಡುವಿನ ಅಂತರದ ಬಗ್ಗೆ ಅಂತರ ಪ್ರಮಾಣ ಪತ್ರ ನೀಡಲು ಸಕ್ಷಮ ಪ್ರಾಧಿಕಾರವನ್ನಾಗಿ ನೇಮಿಸಲಾಗಿದೆ. ಹೊಸ ಸಕ್ಕರೆ ಕಾರ್ಖಾನೆಗಳ ಪ್ರಸ್ತಾವನೆಗಾಗಿ ಸಕ್ಕರೆ ಸಚಿವರ ಅನುಮೋದನೆ ಪಡೆದುಕೊಂಡು, ಅಂತರ ಪ್ರಮಾಣಪತ್ರ ನೀಡಬಹುದು. ಜತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಕೋರಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಮೇ 21ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.ಕೆಬಿಎಸ್‌ಗೆ ಗಣಿ ಉದ್ಯಮಿ ಮಾಲೀಕರು:
ಮೆ. ಕರ್ನಾಟಕ ಬಂಗಾರು ಶುಗರ್ಸ್ ಪ್ರೈ. ಲಿ. ಹೊಸಪೇಟೆ ಮೂಲದ ಗಣಿ ಉದ್ಯಮಿ ಓರ್ವರಿಗೆ ಸಂಬಂಧಿಸಿದ್ದಾಗಿದೆ. ಈ ಉದ್ಯಮಿ ಮೊಮ್ಮಗಳ ಅನ್ವರ್ಥಕ ನಾಮ ಬಂಗಾರು ಆಗಿದೆ. ಇವರ ಮೊಮ್ಮಗಳು ಬಳ್ಳಾರಿ ಮೂಲದ ಶಾಸಕರ ಪುತ್ರಿ. ಹಾಗಾಗಿ ಈ ಕಾರ್ಖಾನೆ ಬಗ್ಗೆ ಈಗ ರಾಜಕೀಯ ವಲಯ ಹಾಗೂ ರೈತ ವಲಯದಲ್ಲೂ ಭಾರೀ ಕುತೂಹಲಕ್ಕೆಡೆ ಮಾಡಿದೆ. ಇನ್ನೂ ಹೊಸಪೇಟೆ ಭಾಗದಲ್ಲಿ ಕಾರ್ಖಾನೆ ಆರಂಭಿಸಬೇಕು ಈ ಭಾಗದ ರೈತರು ಪಟ್ಟು ಹಿಡಿದಿದ್ದಾರೆ. ಅತ್ತ ಹಗರಿಬೊಮ್ಮನಹಳ್ಳಿ ಭಾಗದ ರೈತರು ಕೂಡ ಬೊಮ್ಮನಹಳ್ಳಿ ಭಾಗದಲ್ಲೇ ಕಾರ್ಖಾನೆ ಆಗಲಿ ಎಂದು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))