ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಪ್ಪಿನಲ್ಲಿ ತನ್ನ ಮಗನಿಗೆ ಹೊರೆ ಆಗಬಾರದೆಂದು ಭಾವಿಸಿ ಅಂಧ ಪತ್ನಿಯನ್ನು ಕೊಂದು 85 ವರ್ಷ ವೃದ್ಧರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚೊಕ್ಕನಹಳ್ಳಿ ನಿವಾಸಿ ಸುಮಿತ್ರಾ ದೇವಿ (77) ಹತ್ಯೆಗೀಡಾದ ದುರ್ದೈವಿ. ತಮ್ಮ ಪತ್ನಿಯನ್ನು ಕೊಂದು ಮೃತರ ಪತಿ ನಂದನ್ ಪ್ರಸಾದ್ (85) ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಸೋಮವಾರ ರಾತ್ರಿ ಊಟ ಮಾಡಿದ ಬಳಿಕ ರೂಮ್‌ನಲ್ಲಿ ದಂಪತಿ ಮಲಗಿದಾಗ ಕೃತ್ಯ ನಡೆದಿದ್ದು, ಬೆಳಗ್ಗೆ ಮೃತರ ಕೋಣೆಗೆ ಮಗ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

ನಂದನ್ ಪ್ರಸಾದ್ ಮೂಲತಃ ಬಿಹಾರ ರಾಜ್ಯದವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ಉದ್ಯೋಗದಲ್ಲಿರುವ ತಮ್ಮ ಪುತ್ರ ಕಿರಣ್ ಕುಮಾರ್ ಕಶ್ಯಪ್ ಕುಟುಂಬದ ಜತೆ ಅವರು ನೆಲೆಸಿದ್ದರು. ಮೊದಲು ಏರ್‌ಫೋರ್ಸ್‌ನಲ್ಲಿ ಮಾಸ್ಟರ್ ವಾರೆಂಟ್ ಆಫೀಸರ್ ಆಗಿದ್ದ ಕಶ್ಯಪ್, ನಿವೃತ್ತಿ ಬಳಿಕ ಖಾಸಗಿ ಕಾಲೇಜಿನಲ್ಲಿ ಭದ್ರತಾ ವಿಭಾಗದ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರ ಮಗ-ಮಗಳು ಉದ್ಯೋಗದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಶ್ಯಪ್ ಅವರ ತಾಯಿ ಅಂಧ ಮತ್ತು ಕಿವುಡರಾಗಿದ್ದರು. ವಯೋಸಹಜ ನಂದನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಸಮಸ್ಯೆಯಿಂದ ನಂದನ್ ಅವರಿಗೆ ಬೇಸರ ಮೂಡಿಸಿತ್ತು. ತಮ್ಮ ಮಗನಿಗೆ ನಾವು ಹೊರೆ ಆಗಿದ್ದೇವೆ ಎಂದು ಅವರು ಚಿಂತಿಸುತ್ತಿದ್ದರು. ಈ ನೋವಿನಲ್ಲಿ ಪತ್ನಿ ಕೊಂದು ಆತ್ಮಹತ್ಯೆಗೆ ನಂದನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.


ಅಂತೆಯೇ ಸೋಮವಾರ ರಾತ್ರಿ ಮಗ ಹಾಗೂ ಮೊಮ್ಮಕ್ಕಳು ನಿದ್ರೆಗೆ ಜಾರಿದ ಬಳಿಕ ಅವರು, ತಮ್ಮ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಎಷ್ಟು ಹೊತ್ತಾದರು ಕೋಣೆಯಿಂದ ಅಜ್ಜ ಹೊರಗೆ ಬಾರದೆ ಹೋದಾಗ ಮೊಮ್ಮಗಳಿಗೆ ಆತಂಕವಾಗಿದೆ. ಕೂಡಲೇ ತಂದೆಗೆ ಆಕೆ ಹೇಳಿದ್ದಾಳೆ. ಆಗ ಉಪಾಹಾರಕ್ಕೆ ಬರುವಂತೆ ಅಜ್ಜ-ಅಜ್ಜಿಯನ್ನು ಮತ್ತೆ ಮೊಮ್ಮಗಳು ಕೂಗಿದಾಗಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ಕಶ್ಯಪ್ ಅವರು, ಕೋಣೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ನೇಣಿನ ಕುಣಿಕೆಯಲ್ಲಿ ತಂದೆ ಮೃತದೇಹ ಪತ್ತೆಯಾಗಿದೆ.

ನಾಲ್ವರ ಮಕ್ಕಳು:

ನಂದನ್ ದಂಪತಿಗೆ ನಾಲ್ವರು ಗಂಡು ಮಕ್ಕಳಿದ್ದು, ತಮ್ಮ ಹಿರಿಯ ಪುತ್ರ ಕಶ್ಯಪ್ ಕುಟುಂಬದ ಜತೆ ಅವರು ನೆಲೆಸಿದ್ದರು. ಈ ಮಕ್ಕಳ ಪೈಕಿ ಒಬ್ಬರು ಸೇನೆ, ಮತ್ತೊಬ್ಬರು ರೈಲ್ವೆ ಇಲಾಖೆ ಹಾಗೂ ಮಗದೊಬ್ಬ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಜತೆ ಅನ್ಯೂನ್ಯವಾಗಿಯೇ ಅಜ್ಜ-ಅಜ್ಜಿ ಇದ್ದರು. ಆದರೆ ಜೀವನ ಮುಸ್ಸಂಜೆಯಲ್ಲಿ ಮಕ್ಕಳಿಗೆ ಯಾಕೆ ಭಾರವಾಗಬೇಕು ಎಂದು ಭಾವಿಸಿ ಬಾರದ ಲೋಕಕ್ಕೆ ಹಿರಿಯ ಜೀವ ಹೆಜ್ಜೆ ಹಾಕಿದೆ.