ಸಾರಾಂಶ
ಕಿರುಚಾಟ ಕೇಳಿ ಎದುರು ಮನೆಯಲ್ಲಿದ್ದ ವೃದ್ಧೆಯ ಮೊಮ್ಮಗನ ಪತ್ನಿ ಕಾವ್ಯ ಆರೋಪಿಯು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸುತ್ತಿರುವುದನ್ನು ನೋಡಿ ಕಿರುಚಿಕೊಂಡಿದ್ದಾಳೆ.
ಕನ್ನಡಪ್ರಭ ವಾರ್ತೆ ಕನಕಪುರ
ವೃದ್ಧ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿ ಕೊಲೆ ಮಾಡಿರುವ ಘಟನೆ ಹುಲಿಬಲೆ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಕಸಬಾ ಹೋಬಳಿಯ ಹುಲಿಬಲೆ ಗ್ರಾಮದ ಕೃಷ್ಣ (58) ವೃದ್ಧ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿ ಕೊಲೆ ಮಾಡಿರುವ ಆರೋಪಿ. ಅದೇ ಗ್ರಾಮದ ನಾರಾಯಣಗೌಡರ ಪತ್ನಿ ಸಣ್ಣ ಚಿಕ್ಕಮ್ಮ(80) ಕೊಲೆಯಾದ ವೃದ್ಧ ಮಹಿಳೆಯಾಗಿದ್ದು, ಗುರುವಾರ ರಾತ್ರಿ ಮೃತ ವೃದ್ಧ ಮಹಿಳೆಯ ಮನೆಯಲ್ಲಿ ಈ ಘಟನೆ ನಡೆದಿದೆ.
ಹುಲಿಬಲೆ ಗ್ರಾಮದ ನಾರಾಯಣಗೌಡ, ಸಣ್ಣ ಚಿಕ್ಕಮ್ಮ ವೃದ್ಧ ದಂಪತಿಯಿಬ್ಬರೂ ಊಟ ಮುಗಿಸಿ ಮಲಗಿದ್ದ ವೇಳೆ ಆರೋಪಿ ಕೃಷ್ಣ ರಾತ್ರಿ ಸುಮಾರು 9 ರಿಂದ 10 ಗಂಟೆ ಸಮಯದಲ್ಲಿ ವೃದ್ಧ ದಂಪತಿಯ ಮನೆಗೆ ನುಗ್ಗಿ, ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಮಾಡಲು ಯತ್ನ ನಡೆಸಿದ್ದು, ಕಿರುಚಾಟ ಕೇಳಿ ಎದುರು ಮನೆಯಲ್ಲಿದ್ದ ವೃದ್ಧೆಯ ಮೊಮ್ಮಗನ ಪತ್ನಿ ಕಾವ್ಯ ಆರೋಪಿಯು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸುತ್ತಿರುವುದನ್ನು ನೋಡಿ ಕಿರುಚಿಕೊಂಡಿದ್ದಾಳೆ. ಆಗ ಆರೋಪಿ ಪರಾರಿಯಾಗಿದ್ದು, ಅಕ್ಕಪಕ್ಕದವರು ಬಂದು ನೋಡಿದಾಗ ವೃದ್ಧ ಮಹಿಳೆ ಮೃತಪಟ್ಟಿದ್ದು ಖಚಿತವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಣ್ಣ ಚಿಕ್ಕಮ್ಮನ ಮೃತ ದೇಹವನ್ನು ಪೊಲೀಸ್ ಸಿಬ್ಬಂದಿ ಹಾರೋಹಳ್ಳಿ ಬಳಿಯ ದಯಾನಂದ ಸಾಗರ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿದ್ದಾರೆ. ತಲೆಮರಿಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.