ಸಾಮಾಜಿಕ ಭದ್ರತೆಗೆ ಚುನಾಯಿತ ಪ್ರತಿನಿಧಿಗಳು ಶ್ರಮಿಸಬೇಕು: ತಮ್ಮಯ್ಯ

| Published : Jan 18 2024, 02:03 AM IST

ಸಾಮಾಜಿಕ ಭದ್ರತೆಗೆ ಚುನಾಯಿತ ಪ್ರತಿನಿಧಿಗಳು ಶ್ರಮಿಸಬೇಕು: ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ರೋವರ್ಸ್‌ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್‌.ಡಿ.ತಮ್ಮಯ್ಯಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಅವರ ಭದ್ರತೆಗಾಗಿ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡಬೇಕು ಎಂದು ಹೇಳಿದರು.

- ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ವಿವಿಧ ಘಟಕಗಳ ಉದ್ಘಾಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಅವರ ಭದ್ರತೆಗಾಗಿ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ. ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ರೋವರ್ಸ್‌ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಮಗೆ ಮಾರ್ಗದರ್ಶಕರಾಗಿ ಆದರ್ಶಪ್ರಿಯ ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ, ಮೊದಲ ಐಪಿಎಸ್ ಅಧಿಕಾರಿ ಕಿರಣ್‌ಬೇಡಿ ಮತ್ತಿತರರ ಸೇವೆಯನ್ನು ಸ್ಮರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯಾ ನಂತರ ರಚಿಸಿದ ಸಂವಿಧಾನ ಪ್ರಪಂಚದಲ್ಲೇ ಮತ್ತೊಬ್ಬರು ರಚಿಸಲು ಸಾಧ್ಯವಿಲ್ಲ, ಸಂವಿಧಾನದ ಆಶಯ ಕೇವಲ ಸಮಾನತೆಗಾಗಿ ಆಗಿರದೆ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಪ್ರಾಮಾಣಿಕ ಪ್ರಯತ್ನದಿಂದ ಶ್ರದ್ಧೆ, ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದರೆ ಸಂಸ್ಕಾರವಂತರಾಗುವ ಜೊತೆಗೆ ದೊಡ್ಡ ದೊಡ್ಡ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಿ ಎಂದು ಸಲಹೆ ನೀಡಿದರು. ಈಗಾಗಲೇ ಡಯಟ್ ಆವರಣದಲ್ಲಿ 2 ಎಕರೆ ಜಾಗ ಮೀಸಲಿರಿಸಲಾಗಿದ್ದು, ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತವಾದ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಇಡೀ ಪ್ರಪಂಚದಲ್ಲೇ ಪ್ರಾಧ್ಯಾಪಕರ ಕೊರತೆ ಇದೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ನೀವುಗಳು ವೈದ್ಯರು, ಇಂಜಿನಿ ಯರ್‌ಗಳು ಆಗಲು ಸಾಧ್ಯವಿಲ್ಲ. ವಕೀಲರು ಆಗಬಹುದು. ಇಲ್ಲವೇ ಪ್ರಾಧ್ಯಾಪಕರಾಗಬಹುದು. ಬೇರೆ ಬೇರೆ ಹುದ್ದೆ ಗಳಲ್ಲಿಯೂ ಮುಂದುವರೆಯಬಹುದಾಗಿದೆ ಎಂದರು. ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಕರು, ಪ್ರಾಧ್ಯಾಪಕರ ಅಗತ್ಯವಿದ್ದು, ಸರ್ಕಾರಗಳು ಈ ಕೊರತೆ ನೀಗಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಕರಾಗುವಂತೆ ಕರೆ ನೀಡಿದರು. ಚುನಾಯಿತ ಪ್ರತಿನಿಧಿಗಳಿಗೆ ಕಾಲ ಕಾಲಕ್ಕೆ ತಮಗೆ ತಿಳಿಯದೆಯೇ ಭತ್ಯೆ, ವೇತನ ಬರುತ್ತದೆ. ಆದರೆ ಸರ್ಕಾರಿ ನೌಕರರು ಹಾಗೂ ಗುತ್ತಿಗೆ ಶಿಕ್ಷಕರು ಈ ಹಕ್ಕನ್ನು ಪಡೆಯಲು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ನಟೇಶ್ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ಮಹೇಶ್ವರಪ್ಪ, ಡಾ. ಲೋಕೇಶ್ ನಾಯ್ಕ, ಪ್ರೊ. ದೀಕ್ಷಿತ್ ಕುಮಾರ್, ದೇವರಾಜ್, ಪ್ರೊ. ಲೋಕೇಶ್‌ಗೌಡ, ಹೇಮಮಾಲಿನಿ, ಎಸ್.ಡಿ.ಎಂ.ಸಿ ಸದಸ್ಯರಾದ ಧೃವಕುಮಾರ್, ನಗರಸಭೆ ಮಾಜಿ ಸದಸ್ಯೆ ತೆರೆಸಾ ಲೋಬೋ, ರಾಜಶೇಖರ್, ಚೈತ್ರ, ರವಿ, ಅಮರ್, ಸದಾಶಿವ, ಕಾಲೇಜು ವಾರ್ಷಿಕ ಸಂಚಿಕೆ ಸಂಚಾಲಕ ಡಾ.ಶ್ರೀನಿವಾಸ್ ಉಪಸ್ಥಿತರಿದ್ದರು. 17 ಕೆಸಿಕೆಎಂ 5ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ವಿವಿಧ ಘಟಕಗಳನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ಪ್ರೊ. ನಟೇಶ್‌ ಇದ್ದರು.