ಕಾಂಗ್ರೆಸ್‌ ಕಾರ್ಯಕರ್ತರಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ

| Published : Feb 13 2024, 12:47 AM IST

ಸಾರಾಂಶ

ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್. ನರೇಂದ್ರಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಎಚ್ಚರಿಕೆ ನೀಡಿದರು

ಕನ್ನಡಪ್ರಭ ವಾರ್ತೆ ಹನೂರು

ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್. ನರೇಂದ್ರಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಎಚ್ಚರಿಕೆ ನೀಡಿದರು.ಲೋಕಸಭಾ ಚುನಾವಣೆ ಸಂಬಂಧ ಬಿಎಲ್‌ಒಗಳ ನೇಮಕಾತಿ ಸಂಬಂಧ ಕರೆಯಲಾಗಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಮಾಲಾಪುರ ಗ್ರಾಮದ ಅಂಕರಾಜು ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ದಿ. ಜಿ. ರಾಜುಗೌಡ ಮನೆತನ ಕುಟುಂಬ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ. ದಿವಂಗತ ವೆಂಕಟೇಗೌಡ, ರಾಜುಗೌಡ ಮಾಜಿ ಶಾಸಕ ಆರ್. ನರೇಂದ್ರ ಸೇರಿದಂತೆ 9 ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಈ ಬಾರಿ ಅಭಿವೃದ್ಧಿ ಕಾಮಗಾರಿಗಿಂತ ಹಣಕ್ಕೆ ಮತ ಚಲಾಯಿಸಿದ್ದಾರೆ ಇದರಿಂದ ನಮಗೆ ಸೋಲಾಯಿತು. ನಮ್ಮ ನಾಯಕರಿಗೆ ನಿಗಮ ಮಂಡಳಿ ಅಥವಾ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಇರಬೇಕಾಗುತ್ತದೆ ಎಂದು ಪಕ್ಷದ ವೀಕ್ಷಕರಿಗೆ ಎಚ್ಚರಿಕೆ ನೀಡಿದರು.ಪೆದ್ದನ ಪಾಳ್ಯ ಸಿದ್ದರಾಜು ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸನ ಭದ್ರಕೋಟೆ, ಇಡೀ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಜಯಗಳಿಸಿದ್ದಾರೆ ಆದರೆ ನಮ್ಮ ಕ್ಷೇತ್ರದ ವಿಪರ್ಯಾಸವೆಂದರೆ ಸೋಲು ಅನುಭವಿಸಿದ್ದೇವೆ. ಸದಾ ಪಕ್ಷ ಹಾಗೂ ಪಕ್ಷ ಸಂಘಟನೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ನಮ್ಮ ನಾಯಕ ಮಾಜಿ ಶಾಸಕ ಆರ್. ನರೇಂದ್ರಗೆ ಸೂಕ್ತ ಸ್ಥಾನಮಾನ ನೀಡಲೇಬೇಕು ಇಲ್ಲದಿದ್ದರೆ ನಾವು ಮುಂದೆ ಬರುವ ಎಲ್ಲಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುತ್ತೇವೆ ಎಂದರು.ಮಾರ್ಟಳ್ಳಿ ಗ್ರಾಪಂ ಸದಸ್ಯ ರಾಮಲಿಂಗಂ ಮಾತನಾಡಿ, ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇನ್ನಿತರ ಸಚಿವರುಗಳು ಕ್ಷೇತ್ರಕ್ಕೆ ಬರುವುದೇ ತಿಳಿಯುತ್ತಿಲ್ಲ, ಪಕ್ಷದ ಕಾರ್ಯಕರ್ತರು ಮುಖಂಡರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲ, ಇದೇ ವರ್ತನೆ ಮುಂದುವರೆದರೆ ಮುಂದಿನ ಚುನಾವಣೆಗಳನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ನರೇಂದ್ರ ಈ ಬಾರಿ ಜಯಗಳಿಸಿದ್ದರೆ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಇನ್ನಷ್ಟು ಆಗುತ್ತಿತ್ತು ಎಂಬುದು ನಮಗೂ ತಿಳಿದಿದೆ. ಆದರೆ ಚುನಾವಣೆಯಲ್ಲಿ ಜನತೆಯ ತೀರ್ಪನ್ನು ಗೌರವಿಸಬೇಕು ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲು ಹಿರಿಯ ಮುಖಂಡರುಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಇದಕೊಪ್ಪದ ಕಾಂಗ್ರೆಸ್ ಕಾರ್ಯಕರ್ತರುಗಳು ಮುಖಂಡರುಗಳು ಸಭೆ ಬಹಿಷ್ಕರಿಸಿ ಹೊರ ನಡೆದರು.