ಚುನಾವಣೆ ನೀತಿ ಸಂಹಿತೆ: ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ

| Published : Apr 05 2024, 01:08 AM IST

ಚುನಾವಣೆ ನೀತಿ ಸಂಹಿತೆ: ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಗುರುವಾರ ಕುಶಾಲನಗರ ಹಾಗೂ ಕೊಪ್ಪ ಚೆಕ್‌ಪೋಸ್ಟ್‌ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಚೆಕ್‌ಪೋಸ್ಟ್‌ನಲ್ಲಿ ನಿರಂತರ ನಡೆಸಲಾಗುವ ತಪಾಸಣೆ ಕುರಿತು ಪರಿಶೀಲಿಸಿ ಚೆಕ್‌ಪೋಸ್ಟ್ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಮಡಿಕೇರಿಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ರಮ ನಗದು, ಸಾಮಗ್ರಿ ತಡೆಗಾಗಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು ತೆರೆದು ಪ್ರತಿದಿನ ನಿರಂತರವಾಗಿ ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಗುರುವಾರ ಕುಶಾಲನಗರ ಹಾಗೂ ಕೊಪ್ಪ ಚೆಕ್‌ಪೋಸ್ಟ್‌ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಚೆಕ್‌ಪೋಸ್ಟ್‌ನಲ್ಲಿ ನಿರಂತರ ನಡೆಸಲಾಗುವ ತಪಾಸಣೆ ಕುರಿತು ಪರಿಶೀಲಿಸಿ ಚೆಕ್‌ಪೋಸ್ಟ್ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ದಾಖಲೆಗಳಿಲ್ಲದೆ ನಗದು, ಸಾಮಗ್ರಿ, ಚಿನ್ನಾಭರಣ, ಮದ್ಯ ಹಾಗೂ ವಾಣಿಜ್ಯ ಸರಕುಗಳನ್ನು ವಾಹನಗಳಲ್ಲಿ ಸಾಗಾಟ ಮಾಡುವುದನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು. ದಾಖಲೆ ರಹಿತ ಸಾಮಾಗ್ರಿಗಳು ಮತ್ತು ನಗದು ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರತ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಚೆಕ್‌ಪೋಸ್ಟ್ ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಕೆಲಹೊತ್ತು ತಾವೇ ಖುದ್ದಾಗಿ ತಪಾಸಣೆ ನಡೆಸುವ ಮೂಲಕ ಚೆಕ್‌ಪೋಸ್ಟ್ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಮಾದರಿಯಾದರು.

ಚುನಾವಣೆ ಅಂತ್ಯದವರೆಗೆ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ನಿರಂತರವಾಗಿ ನಡೆಯಬೇಕು. ಅನಧಿಕೃತ, ದಾಖಲೆ ರಹಿತ ನಗದು ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಕುಶಾಲನಗರ ಹಾಗೂ ಕೊಪ್ಪ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಹಾಜರಿದ್ದು, ಜಿಲ್ಲಾಧಿಕಾರಿ ಆದೇಶ ಪಾಲಿಸಲಾಗುವುದು ಎಂದು ಹೇಳಿದರು.