ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಧಾವಂತದ ಬದುಕಿನಲ್ಲಿ ನೆಮ್ಮದಿ ಪ್ರಾಪ್ತಿಗೆ ಎಲ್ಲರಿಗೂ ತಾಳ್ಮೆ ಎಂಬುದು ಅಸ್ತ್ರವಾಗಬೇಕು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಚಿಕ್ಕಬ್ಬೂರು ಗ್ರಾಮದಲ್ಲಿ ಕಬ್ಬೂರು, ಗುಡುಗಿನಕೊಪ್ಪ, ಹೊಸಗುಡುಗಿನಕೊಪ್ಪ, ಕಾನುಕೊಪ್ಪ ಗ್ರಾಮದ ವತಿಯಿಂದ ಪ್ರತಿಷ್ಠಾಪಿಸಿದ ಶ್ರೀ ವೀರಾಂಜನೇಯ ಮೂರ್ತಿ ದೇವರ ಮಂಡಲೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಜೀವನದಲ್ಲಿ ನೆಮ್ಮದಿ ಸಿಗುವುದು ಅಪರೂಪ. ಅದನ್ನು ಎಲ್ಲಿಯೂ ಖರೀದಿಸಲು ಆಗದು. ಆದರೆ ನೆಮ್ಮದಿ ಇರದಿದ್ದರೆ ಬದುಕು ಅಪೂರ್ಣ. ಶರಣರು ಹೇಳಿದಂತೆ ಸಂತೆಯೊಳಗೆ ಒಂದು ಮನೆ ಮಾಡಿ ಗೌಜು ಗದ್ದಲಗಳಿಗೆ ಹೆದರಿದರೆ ಸರಿಯೇ? ಸಮುದ್ರದ ದಡೆಯಲ್ಲಿ ಮನೆಯ ಮಾಡಿ ನೆರೆ ತೊರೆ ಗಳಿಗೆ ಹೆದರಿ ಅಂಜುವುದೇ? ಕಾಡಿನಲ್ಲಿ ಮನೆ ಮಾಡಿ ಕ್ರೂರ ಮೃಗಗಳಿಗೆ ಹೆದರಿದರೆ ಹೇಗೆ? ಹಾಗೆಯೇ ಸಂಸಾರದಲ್ಲಿ ಬಂದ ಬಳಿಕ ಯಾವುದಕ್ಕೂ ಹೆದರದೆ ಜೀವನದ ಸಮಸ್ಯೆ ಎದುರಿಸಬೇಕು ಎಂದರು.ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನ ಜನ್ಮ ಅರಿವಿನ ಜನ್ಮ. ಸೃಷ್ಟಿಯ ಎಲ್ಲಾ ಜೀವಿಗಳೂ ಮರೆವಿನ ಜನ್ಮ ಹೊಂದಿದ್ದರೆ ಮನುಷ್ಯ ಮಾತ್ರ ಅರಿವು ಹಾಗೂ ಮರೆವು ಎರಡನ್ನೂ ಹೊಂದಿದ್ದಾನೆ. ಆದ್ದರಿಂದ ನಾವು ಕೆಲವನ್ನು ಮರೆಯುತ್ತೇವೆ ಮತ್ತೆ ಕೆಲವನ್ನು ನೆನಪಿಸಿಕೊಳ್ಳುತ್ತೇವೆ. ಹಾಗೆ ನೆನಪಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ದೇವರು ನಮಗೆ ಏನೆಲ್ಲವನ್ನು ಮಾಡಿದ್ದಾನೆ. ಅವನನ್ನು ಸದಾಕಾಲವು ನೆನಪಿಸಿಕೊಳ್ಳುತ್ತಿರಬೇಕು ಎಂದರು.ಹಿರೇಮಾಗಡಿ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮೀಜಿ, ವಕೀಲ ಅಶೋಕ ಗೌಡ್ರು ಹಾನಗಲ್ ಮಾತನಾಡಿದರು. ಈ ವೇಳೆ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಊರ ಹಿರಿಯರನ್ನು ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಶನಿ ಪ್ರಭಾವ ಅರ್ಥಾತ್ ರಾಜಾ ವಿಕ್ರಮ ಎಂಬ ಪೌರಾಣಿಕ ನಾಟಕ ಪ್ರದರ್ಶಿಸಿಲಾಯಿತು.
ಲೋಕಪ್ಪ, ಬಸವರಾಜಪ್ಪ ಕೊಡಕಣಿ, ಪ್ರಹ್ಲಾದಪ್ಪ, ವಜ್ರಮುನಿ, ರಘು, ಪರಸಪ್ಪ, ನಿಂಗಪ್ಪ ಗೌಡ್ರು, ಚಂದ್ರಶೇಖರಪ್ಪ, ನಿಂಗಪ್ಪ ಹಾಗೂ ದೇವಾಲಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))