ಸಾರಾಂಶ
ಹುಬ್ಬಳ್ಳಿ: ನಗರದ ಮುಸ್ಲಿಂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಮುಂದಿನ ಮೂರು ವರ್ಷಗಳ ಚುನಾಯಿತ ಆಡಳಿತ ಮಂಡಳಿಗೆ ಫೆ.18ರಂದು ಮತದಾನ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶಾಂತಿಯುತ ಮತದಾನಕ್ಕೆ ಪೊಲೀಸ್ ಕೂಡ ನಿಗಾವಹಿಸಿದೆ.
ನೆಹರು ಕಾಲೇಜ್ ಸಮೀಪದ ಘಂಟಿಕೇರಿಯ ಸರಕಾರಿ ಪ್ರಾಥಮಿಕ ಶಾಲೆ ನಂ. 5ರಲ್ಲಿನ ಮತಗಟ್ಟೆಯಲ್ಲಿ 18ರಂದು ಬೆಳಗ್ಗೆ 7 ಗಂಟೆಯಿಂದ 5 ಗಂಟೆವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ 6 ಗಂಟೆ ಬಳಿಕ ಮತ ಎಣಿಕೆ ಪ್ರಕ್ರಿಯೆ ಶುರುವಾಗಲಿದೆ.ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿ, ನಾಲ್ವರು ಸದಸ್ಯರು, 10 ಪೋಷಕ ಸದಸ್ಯರು, ಶಿಕ್ಷಣ ಮಂಡಳಿಯ 7 ಸದಸ್ಯರು ಹಾಗೂ 25 ಸಾಮಾನ್ಯ ಸದಸ್ಯರು ಸೇರಿ 52 ಸ್ಥಾನಗಳಿದ್ದು, 211 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ನಡೆಯಲಿದೆ.
ಒಟ್ಟು 11903 ಜನ ಸದಸ್ಯರು ಮತದಾನ ಹಕ್ಕು ಹೊಂದಿದ್ದು, ಪ್ರತಿಯೊಬ್ಬರು 52 ಮತಗಳನ್ನು ಚಲಾಯಿಸಬೇಕಿದೆ. ಅಂಜುಮನ್ ಸಂಸ್ಥೆಯ ಚುನಾಯಿತ ಮಂಡಳಿ ಅಧಿಕಾರ ಅವಧಿ 3 ವರ್ಷದ್ದಾಗಿದೆ. ಶನಿವಾರ ಸಂಜೆ ಮತಗಟ್ಟೆಗೆ ಮತಪೆಟ್ಟಿಗೆ ಹಾಗೂ ಚುನಾವಣಾ ಮತಪತ್ರ, ಇತರೆ ಮತದಾನ ಸಾಮಗ್ರಿಗಳನ್ನು ಸಾಗಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.ಬಿಗಿ ಬಂದೋಬಸ್ತ್
ಭಾನುವಾರ ನಡೆಯಲಿರುವ ಅಂಜುಮನ್ ಎ ಇಸ್ಲಾಂ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಮತಗಟ್ಟೆಸುತ್ತ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿದೆ.ಮುಂದೂಡಿಕೆ ಆಗಿದ್ದ ಚುನಾವಣೆ
ಹಾಗೆ ನೋಡಿದರೆ 20 ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಸವಣೂರ ನೇತೃತ್ವದ ಹಿಂದಿನ ಆಡಳಿತ ಮಂಡಳಿ ಅವಧಿ 2022 ಜೂನ್ 16ಕ್ಕೆ ಕೊನೆಗೊಂಡಿದೆ. ನಾನಾ ಕಾರಣಗಳಿಂದ ಚುನಾವಣೆ ಮುಂದೂಡಿಕೆಯಾಗುತ್ತಲೇ ಬಂದಿತ್ತು.ಚುನಾವಣೆ ಗೆಲ್ಲಲು ನಾಲ್ಕು ಬಣಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಈ ಹಿಂದೆ ಎರಡು ಬಣಗಳ ಮಧ್ಯೆ ನೇರ ತುರುಸಿನ ಸ್ಪರ್ಧೆ ನಡೆಯುತ್ತಿತ್ತು. ಈ ಸಲ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಅಧ್ಯಕ್ಷ ಎಂ.ಸಿ. ಸವಣೂರ, ಅಲ್ತಾಫ ಕಿತ್ತೂರ, ಮತ್ತು ಮಜರಖಾನ, ಅನ್ವರ ಮುಧೋಳ ಮತ್ತು ಎನ್.ಡಿ. ಗದಗಕರ, ವಹಾಬ್ ಮುಲ್ಲಾ ನೇತೃತ್ವದ ನಾಲ್ಕು ಬಣಗಳಾಗಿ ವಿಂಗಡನೆಯಾಗಿವೆ. ನಾಲ್ಕು ಬಣಗಳ ಮಧ್ಯೆ ಪೈಪೋಟಿ ಬಲು ಜೋರಾಗಿದೆ. ಮತದಾರರು ಗೊಂದಲಕ್ಕೆ ಸಿಲುಕಿದ್ದಾರೆ.
ನಾಲ್ಕು ಬಣಗಳು ತುರುಸಿನ ಪೈಪೋಟಿ ನಡೆದಿದ್ದರೂ ಆಂತರಿಕ ಬಣ ರಾಜಕೀಯ ಕೊಡು ಕೊಳ್ಳುವಿಕೆಯ ಚರ್ಚೆಗಳು ಜೋರಾಗಿವೆ. ಹಾಗಾಗಿ ನಾಲ್ಕು ಬಣಗಳಲ್ಲಿ ಯಾವ ಬಣ ಯಾರಿಗೆ ಹೊಡೆತ ನೀಡಲಿದೆ, ಯಾರಿಗೆ ನೆರವಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.