ಎಂಡಿಸಿಸಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ: ಪುಟ್ಟಸ್ವಾಮೀಗೌಡರಿಂದ ಪ್ರಚಾರ

| Published : Oct 29 2025, 01:15 AM IST

ಸಾರಾಂಶ

ಡಿಸಿಸಿ ಬ್ಯಾಂಕ್ ಚುನಾವಣೆಯೂ ಪ್ರತಿಷ್ಠೆ ಕಣವಾಗಿದೆ. ತಾಲೂಕಿನಿಂದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಎಚ್.ಸಿ.ಪುಟ್ಟಸ್ವಾಮೀಗೌಡ ಸ್ಪರ್ಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ)ನ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಾಲೂಕಿನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಸಿ.ಪುಟ್ಟಸ್ವಾಮೀಗೌಡ(ಹೊಸಕೋಟೆ ಪುಟ್ಟಣ್ಣ) ಸೋಮವಾರ ತಾಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಿದರು.ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಡೆಲಿಗೇಟ್ಸ್(ಮತದಾರರು)ಗಳನ್ನು ಭೇಟಿಮಾಡಿ ತಮಗೆ ಮತನೀಡುವಂತೆ ಮನವಿ ಮಾಡಿದರು.ಈ ವೇಳೆ ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಯೂ ಪ್ರತಿಷ್ಠೆ ಕಣವಾಗಿದೆ. ತಾಲೂಕಿನಿಂದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಎಚ್.ಸಿ.ಪುಟ್ಟಸ್ವಾಮೀಗೌಡ(ಹೊಸಕೋಟೆಪುಟ್ಟಣ್ಣ) ಸ್ಪರ್ಧಿಸಿದ್ದಾರೆ. ಜೆಡಿಎಸ್ ಬೆಂಬಲಿತ ಸೇರಿದಂತೆ ಎಲ್ಲಾ ಮತದಾರರು ಪುಟ್ಟಸ್ವಾಮಿಗೌಡರಿಗೆ ಹೆಚ್ಚಿನ ಮತಕೊಟ್ಟು ಗೆಲ್ಲಿಸುವ ಮೂಲಕ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.ಅಭ್ಯರ್ಥಿ ಎಚ್.ಸಿ.ಪುಟ್ಟಸ್ವಾಮೀಗೌಡ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿರುವ ನಾನು ಡಿಸಿಸಿ ಬ್ಯಾಂಕ್ ಚುನಾವಣೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನ್ನನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ನಮ್ಮ ನಾಯಕ ಸಿ.ಎಸ್.ಪುಟ್ಟರಾಜು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಕ್ಷೇತ್ರದಲ್ಲಿ ಮತದಾರರು ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು. ಈ ವೇಳೆ ಜೆಡಿಎಸ್ ಪಕ್ಷದ ಅಧ್ಯಕ್ಷ ಎಸ್.ಎ.ಮಲ್ಲೇಶ್, ಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ ಪಿ.ಚಲುವರಾಜು, ಹಳೇಬೀಡು ಗ್ರಾಪಂ ಅಧ್ಯಕ್ಷ ಎಚ್.ಸಿ.ಧನಂಜಯ್ ಸೇರಿದಂತೆ ಹಲವರು ಇದ್ದರು.

ಡೀಸಿ ಹುಟ್ಟುಹಬ್ಬ: ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಉಚಿತ ಹೇರ್‌ಕಟ್

ಮಂಡ್ಯ:

ನಗರದ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಮಂಡ್ಯ ಜಿಲ್ಲಾ ಸವಿತಾ ಸಮಾಜ ಸಂಘ ನಗರ ಸಮಿತಿಯಿಂದ ಜಿಲ್ಲಾಧಿಕಾರಿ ಡಾ.ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉಚಿತ ಕೇಶವಿನ್ಯಾಸ(ಕೂದಲು ಕಟಿಂಗ್‌) ಮಾಡಲಾಯಿತು.

ಜಿಲ್ಲಾ ಸವಿತಾ ಸಮಾಜದ ಸಂಘದ ಮಾಜಿ ಅಧ್ಯಕ್ಷ ಪ್ರತಾಪ್ , ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಜಿಲ್ಲಾಧಿಕಾರಿ ಡಾ.ಕುಮಾರ್ ಅವರ ಆಡಳಿತ ಜನಸ್ನೇಹಿ ಮತ್ತು ಜನಪರವಾದದ್ದು ಎಂದರು.

ಅತಿ ಹಿಂದುಳಿದ ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿರುವ ಸವಿತಾ ಸಮಾಜ ದುಡಿಮೆಯನ್ನು ನಂಬಿ ಜೀವನ ನಡೆಸುತ್ತಿರುವ ಸಮಾಜವಾದರೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉಚಿತ ಕೇಶವಿನ್ಯಾಸ ಮಾಡುವಂತಹ ಸೇವಾ ಭಾವನೆಯನ್ನು ಪ್ರದರ್ಶಿಸುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ನೀಡಲು ಮುಂದಾಗಿ ಇತರರಿಗೂ ಪ್ರೇರಣೆಯಾಗಿದ್ದಾರೆ ಎಂದು ಶ್ಲಾಘಿಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಆರ್.ಜಯರಾಂ, ನಾಗರಾಜು, ಸೋಮಣ್ಣ, ರಾಜಣ್ಣ, ಸಂತೋಷ್ ಸೇರಿದಂತೆ ಹಲವರು ಇದ್ದರು.ಉಪಾಧ್ಯಕ್ಷರಾಗಿ ಜಯಣ್ಣ ನೇಮಕ

ಮಳವಳ್ಳಿ: ತಾಲೂಕಿನ ಬೋಸೇಗೌಡನದೊಡ್ಡಿ ಗ್ರಾಮದ ಜಯಣ್ಣ ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಸ್ಥಳೀಯ ನಾಯಕರ ಸಹಕಾರೊಂದಿಗೆ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪಿ.ಮನ್ವಿತ್ ಗೌಡ ಆಯ್ಕೆ

ಪಾಂಡವಪುರ: ತಾಲೂಕಿನ ಬೆಳ್ಳಾಳೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿ ಪಿ.ಮನ್ವಿತ್ ಗೌಡ ಮಂಡ್ಯ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಯ್ಕೆಯಾಗಿದ್ದಾರೆ.