ಚುನಾವಣೆ ಮಾದರಿ ನೀತಿ ಸಂಹಿತೆ ಪಾಲಿಸಿ: ಕೃಷ್ಣಾ ಶಾವಂತಗೇರಿ

| Published : Mar 26 2024, 01:08 AM IST

ಸಾರಾಂಶ

ಜೇವರ್ಗಿ ಮತ ಕ್ಷೇತ್ರ-35ರಲ್ಲಿ ಒಟ್ಟು 2,44,495, ಮತದಾರರಿದ್ದು, ಅದರಲ್ಲಿ ಪುರುಷರು 1,22,535, ಮಹಿಳೆಯರು 1,18,910, ಇತರರು 28 ಮತದಾರರಿದ್ದಾರೆ ಎಂದು ಜೇವರ್ಗಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೃಷ್ಣಾ ಶಾವಂತಗೇರಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಲೋಕಸಭೆ ಚುನಾವಣೆ ನಿಮಿತ್ತ ಮಾ.16ರಿಂದ ಜೂ.6ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಸಾರ್ವಜನಿಕರು ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಜೇವರ್ಗಿ ಮತ ಕ್ಷೇತ್ರ-35ರಲ್ಲಿ ಒಟ್ಟು 2,44,495, ಮತದಾರರಿದ್ದು, ಅದರಲ್ಲಿ ಪುರುಷರು 1,22,535, ಮಹಿಳೆಯರು 1,18,910, ಇತರರು 28 ಮತದಾರರಿದ್ದಾರೆ ಎಂದು ಜೇವರ್ಗಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೃಷ್ಣಾ ಶಾವಂತಗೇರಿ ತಿಳಿಸಿದ್ದಾರೆ.

ಅವರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಜೇವರ್ಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಜೇವರ್ಗಿ, ನೆಲೋಗಿ, ಆಂದೋಲಾ, ಯಡ್ರಾಮಿ, ಇಜೇರಿ ಎಂಬ 5 ಸೆಕ್ಟರ್‌ಗಳಿದ್ದು, 15 ತಂಡಗಳು 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲಿದ್ದಾರೆ. ಮತಕ್ಷೇತ್ರದಲ್ಲಿ ಜೇರಟಗಿ, ಚಿಗರಳ್ಳಿ, ನಾಗರಹಳ್ಳಿ, ನಾಗ ಅಲ್ಲಾಪುರ ಬಳಿ 4 ಚೆಕ್‌ಪೋಸ್ಟ್‌ ಪ್ರಾರಂಭಿಸಲಾಗಿದೆ. ಇಲ್ಲಿ 12 ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಸೆಕ್ಟರ್ ಅಧೀನ 21 ಜನ ಎಂಜಿನಿಯರ್ ಕಾರ್ಯನಿರ್ವಹಿಸಲಿದ್ದಾರೆ.

ಜೇವರ್ಗಿ ಮತಕ್ಷೇತ್ರದಲ್ಲಿ 279 ಮತಗಟ್ಟೆಗಳಿವೆ. ಕಲಬುರಗಿ ಜಿಲ್ಲೆಯಲ್ಲಿ ಮೇ 7ರಂದು 2ನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. 14 ಜನ ಉಪನ್ಯಾಸಕರು ಮಾಸ್ಟರ್ ತರಬೇತುದಾರರಿದ್ದು, ಈ ಎಲ್ಲಾ ಚುನಾವಣೆ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಎನ್ಎಲ್ಎಂ ತಂಡ ಚುನಾವಣೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಕೊನೆಯದಾಗಿ ತರಬೇತಿ ನೀಡುತ್ತಾರೆ ಎಂದರು.

ಈ ವೇಳೆ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಡಿ.ಬಿ. ಪಾಟೀಲ ಇದ್ದರು.