ಚುನಾವಣೆ: ಕುರುಡು ಕಾಂಚಾಣದ ಕುಣಿತ ಜೋರಾಗಿದೆ!

| Published : Apr 20 2024, 01:09 AM IST

ಚುನಾವಣೆ: ಕುರುಡು ಕಾಂಚಾಣದ ಕುಣಿತ ಜೋರಾಗಿದೆ!
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಆಯೋಗದ ಕಣ್ತಪ್ಪಿಸಿ ಕೋಟಿ ಕೋಟಿ ಹಣ ಸರಬರಾಜು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ ಎಂಬುದಕ್ಕೆ ಇತ್ತೀಚಿಗೆ ಪೊಲೀಸರು, ಐಟಿ ಅಧಿಕಾರಿಗಳ ದಾಳಿಯಿಂದ ದೊರೆತಿರುವ ಹಣವೇ ಸಾಕ್ಷಿ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕುರುಡು ಕಾಂಚಣ ಕುಣಿಯುತಲಿತ್ತು.. ಕಾಲಿಗೆ ಬಿದ್ದವರ ತುಳಿಯುತಲಿತ್ತು..!

ಇದು 1938ರಲ್ಲಿ ದ.ರಾ. ಬೇಂದ್ರೆ ಅವರು ಬರೆದ ನಾದಲೀಲೆ ಕವನ ಸಂಕಲನದ ಹಾಡು. ಇದು ಈಗಿನ ಚುನಾವಣೆಗೆ ತಕ್ಕದಾಗಿದೆ. ಚುನಾವಣಾ ಆಯೋಗದ ಕಣ್ತಪ್ಪಿಸಿ ಕೋಟಿ ಕೋಟಿ ಹಣ ಸರಬರಾಜು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ ಎಂಬುದಕ್ಕೆ ಇತ್ತೀಚಿಗೆ ಪೊಲೀಸರು, ಐಟಿ ಅಧಿಕಾರಿಗಳ ದಾಳಿಯಿಂದ ದೊರೆತಿರುವ ಹಣವೇ ಸಾಕ್ಷಿ. ಹಣದೊಂದಿಗೆ ಬಗೆಬಗೆಯ ಗಿಫ್ಟ್‌ ಕೊಡುವ ಮೂಲಕ ಮತದಾರರಿಗೆ ಆಮಿಷ ಒಡ್ಡುವ ಕೆಲಸ ನಡೆಯುತ್ತಿದೆ.

ಹಾಗಂತ ಜಿಲ್ಲಾ ಚುನಾವಣಾ ಶಾಖೆಯೇನೂ ಸುಮ್ಮನೆ ಕುಳಿತಿಲ್ಲ. ಜಿಲ್ಲೆಯಲ್ಲಿ ಬರೋಬ್ಬರಿ 28 ಚೆಕ್‌ಪೋಸ್ಟ್‌ ತೆರೆದು ನಿತ್ಯ ಹೊರಗಿನಿಂದ ಬರುತ್ತಿರುವ ವಾಹನಗಳ ತಪಾಸಣೆ ಮಾಡುತ್ತಿದೆ. ಜತೆಗೆ ಸಂಶಯ ಬಂದವರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಈವರೆಗೆ ಎಷ್ಟು?:

ಜಿಲ್ಲೆಯಲ್ಲಿ ಮಾ. 16ರಿಂದ ನೀತಿ ಸಂಹಿತೆ ಜಾರಿಯಾದ ದಿನದಿಂದ ಈ ವರೆಗೆ ಬರೋಬ್ಬರಿ ₹ 20,28,90,470 ನಗದು ಪತ್ತೆಯಾಗಿದೆ. ಅದರಲ್ಲಿ ₹ 18 ಕೋಟಿ ಧಾರವಾಡದ ಮನೆಯೊಂದರಲ್ಲಿ ಪತ್ತೆಯಾಗಿದ್ದರೆ, ₹ 2 ಕೋಟಿಗೂ ಅಧಿಕ ಹಣ ಕುಂದಗೋಳ ತಾಲೂಕಿನ ರಾಮನಕೊಪ್ಪದ ಮನೆಯೊಂದರಲ್ಲಿ ಪತ್ತೆಯಾಗಿದೆ. ಉಳಿದಂತೆ ಹಣವೆಲ್ಲವೂ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿರುವುದಾಗ ಪತ್ತೆಯಾಗಿರುವುದು.

ಧಾರವಾಡದಲ್ಲಿ ಪತ್ತೆಯಾಗಿರುವ ₹ 18 ಕೋಟಿ, ರಾಮನಕೊಪ್ಪದಲ್ಲಿ ಪತ್ತೆಯಾಗಿರುವ ₹ 2 ಕೋಟಿ ಹಣದ ಮೂಲ ತನಿಖೆಯಿಂದಲೇ ತಿಳಿದುಬರಬೇಕಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಹಣ ಪತ್ತೆಯಾಗಿರುವುದು ಪ್ರಜ್ಞಾವಂತರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಇನ್ನು ₹ 30.90 ಲಕ್ಷ ಮೌಲ್ಯದ 10545 ಲೀಟರ್‌ ಮದ್ಯ, ₹ 9.26 ಲಕ್ಷ ಮೌಲ್ಯದ ಡ್ರಗ್ಸ್‌, ₹ 38.50 ಲಕ್ಷ ಮೌಲ್ಯದ ಚಿನ್ನಾಭರಣ, ₹ 30.07 ಲಕ್ಷ ಮೌಲ್ಯದ ಕುಕ್ಕರ್‌, ಸೀರೆ, ಪ್ಯಾಂಟ್‌ ಪೀಸ್‌ ಸೇರಿದಂತೆ ವಿವಿಧ ಬಗೆಯ ವಸ್ತುಗಳು ಪತ್ತೆಯಾಗಿವೆ. ಇವೆಲ್ಲವೂ ಚುನಾವಣಾ ಕರ್ತವ್ಯದ ಮೇಲಿರುವ ಅಧಿಕಾರಿಗಳಿಗೆ ದೊರೆತಿರುವ ವಸ್ತುಗಳು. ಚುನಾವಣಾ ಸಿಬ್ಬಂದಿಯ ಕಣ್ತಪ್ಪಿಸಿ ಸಾಕಷ್ಟು ಪ್ರಮಾಣದಲ್ಲಿ ನಗದು, ಬಗೆ-ಬಗೆಯ ಗಿಫ್ಟ್‌ಗಳು ಸರಬರಾಜು ಆಗಿರುವುದು ಬಹಿರಂಗ ಸತ್ಯ.

ಚುನಾವಣೆಯೆಂದರೆ ಮದ್ಯಾರಾಧನೆ, ಗಿಫ್ಟ್‌ ಇರುವುದು ಮಾಮೂಲಿ. ಆದರೆ ಲಕ್ಷಗಟ್ಟಲೇ ಮೌಲ್ಯದ ಡ್ರಗ್ಸ್‌ ಕೂಡ ಪತ್ತೆಯಾಗಿರುವುದು ಈ ಚುನಾವಣೆ ಮತದಾರರನ್ನು ಭ್ರಷ್ಟರನ್ನಾಗಿ ಅಷ್ಟೇ ಮಾಡುತ್ತಿಲ್ಲ. ಬದಲಿಗೆ ಚಟಗಾರರನ್ನಾಗಿ ಮಾಡುತ್ತಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕಳವಳವನ್ನುಂಟು ಮಾಡುತ್ತಿದೆ.

ಹಾಗೆ ನೋಡಿದರೆ ಚುನಾವಣೆ ಘೋಷಣೆಗೂ ಮುನ್ನವೇ ಅಲ್ಲಲ್ಲಿ ಮತದಾರರಿಗೆ ಕುಕ್ಕರ್‌, ಸೀರೆ, ಬಗೆ ಬಗೆಯ ಕಿಟ್‌ ಹಂಚುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಲಾಗಿದೆ. ಇದೀಗ ಚುನಾವಣೆ ಘೋಷಣೆಯಾದ ಬಳಿಕ ಅದು ಕೊಂಚ ಜೋರಾಗಿಯೇ ನಡೆಯುತ್ತಿದೆ.

ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ಅಕ್ರಮ ತಡೆಯುವ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿದೆಯಾದರೂ ಅವರ ಕಣ್ತಪ್ಪಿಸಿ ಅಲ್ಲಲ್ಲಿ ಅಕ್ರಮಗಳು ನಡೆಯುತ್ತಿವೆ.