ಕುತೂಹಲ ಮೂಡಿಸಿದ ಕಂಪ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

| Published : Aug 09 2024, 12:55 AM IST

ಕುತೂಹಲ ಮೂಡಿಸಿದ ಕಂಪ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

2020ರ ನ.6ರಂದು ಅಧ್ಯಕ್ಷೆ-ಉಪಾಧ್ಯಕ್ಷ ಚುನಾವಣೆ ನಡೆಯಿತು.

ಕಂಪ್ಲಿ: ಸ್ಥಳೀಯ ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಮಧ್ಯೆ ರಾಜಕೀಯ ಕಸರತ್ತು ಶುರುವಾಗಿದೆ.

2019ರ ನವೆಂಬರ್‌ 12ರಂದು ಪುರಸಭೆ ಚುನಾವಣೆ ನಡೆಯಿತು. ನ.14ರಂದು ಫಲಿತಾಂಶ ಪ್ರಕಟವಾಯಿತು. 2020ರ ನ.6ರಂದು ಅಧ್ಯಕ್ಷೆ-ಉಪಾಧ್ಯಕ್ಷ ಚುನಾವಣೆ ನಡೆಯಿತು. ಪುರಸಭೆ ಮೊದಲ ಅವಧಿಗೆ ಅಧ್ಯಕ್ಷರಾಗಿ ಶಾಂತಲಾ ವಿ.ವಿದ್ಯಾಧರ, ಉಪಾಧ್ಯಕ್ಷೆಯಾಗಿ ನಿರ್ಮಲಾ ಕೆ.ವಸಂತಕುಮಾರ್ ಆಯ್ಕೆಯಾದರು. 2020ರ ನ.26ರಂದು ಪುರಸಭೆ ಸದಸ್ಯರ ಮೊದಲ ಸಭೆ ನಡೆಯಿತು. ಇಲ್ಲಿಂದ ಪುರಸಭೆ ಸದಸ್ಯರ ಅಧಿಕಾರಾವಧಿ ಆರಂಭಗೊಂಡಿತು. 2023ರ ಮಾ.10ರಂದು ಶಾಂತಲಾ ವಿ.ವಿದ್ಯಾಧರ ತಮ್ಮ ಅಧ್ಯಕ್ಷ ಅವಧಿಯ ಕೊನೇ ಸಭೆ ನಡೆಸಿದರು. 2023ರ ಮೇ 12ರಂದು ಆಡಳಿತಾಧಿಕಾರಿಗಳಾಗಿ ಎಸಿ ಅಧಿಕಾರ ಸ್ವೀಕರಿಸಿದರು. ಬಳಿಕ ಒಬಿಸಿ ಮೀಸಲಾತಿ ವಿಚಾರಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯದೇ ಕಳೆದ 15 ತಿಂಗಳವರೆಗೂ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಜರುಗದ ಕಾರಣ ಅಧಿಕಾರವಿಲ್ಲದೇ ಸದಸ್ಯರು ಅತಂತ್ರರಾಗಿದ್ದರು.

ಇದೀಗ ಸರ್ಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು ಪ್ರಕಟಿಸಿದ್ದು, ಕಳೆದ ಒಂದೂವರೆ ವರ್ಷದಿಂದ ಕಂಗಾಲಾದಂತಾಗಿದ್ದ ಪುರಸಭೆ ಸದಸ್ಯರು ತಮ್ಮ ರಾಜಕೀಯ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.

ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳು:

ಕಳೆದ ಮೂರೂವರೆ ವರ್ಷಗಳ ಹಿಂದೆ ಪುರಸಭೆಯ 23 ವಾರ್ಡ್ ಸದಸ್ಯರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ 13ರಲ್ಲಿ ಬಿಜೆಪಿ ಅಭ್ಯರ್ಥಿಗಳು, 10ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಮೊದಲ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯ ವೇಳೆ 13 ಸದಸ್ಯರ ಬಹುಮತ ಹೊಂದಿದ್ದ ಬಿಜೆಪಿ ಅಭ್ಯರ್ಥಿಗಳು ಪುರಸಭೆ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷದ ನಾಯಕರು ಸ್ಥಳೀಯ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂಬ ಉದ್ದೇಶದಿಂದ ಭಾರಿ ಕಸರತ್ತು ನಡೆಸಿದ್ದಾರೆ. ಸಂಸದರು, ಶಾಸಕರ ಮತ ಸೇರಿ ಕಾಂಗ್ರೆಸ್ ಗೆ 12 ಮತಗಳಿವೆ. ಒಂದು ವೇಳೆ ಕಾಂಗ್ರೆಸ್ ನಾಯಕರೇನಾದರೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ರಾಜಕೀಯ ಚಾಣಾಕ್ಷತನ ತೋರಿಸಿ ಬಿಜೆಪಿ ಸದಸ್ಯರಲ್ಲಿ ಇಬ್ಬರು ಚುನಾವಣೆಯ ವೇಳೆ ಗೈರು ಹಾಜರಾಗುವಂತೆ ಮಾಡಿದರೆ ಕಾಂಗ್ರೆಸ್ ಅಧಿಕಾರ ವಹಿಸುವ ಸಾಧ್ಯತೆ ಎನ್ನುವ ಅಭಿಪ್ರಾಯವಿದೆ.

ಇನ್ನೊಂದೆಡೆ, ನಮ್ಮ 13 ಬಿಜೆಪಿ ಸದಸ್ಯರೆಲ್ಲ ನಮ್ಮ ಬೆಂಬಲಕಿದ್ದರೆ ಮತ್ತೊಮ್ಮೆ ಬಿಜೆಪಿಯೇ ಅಧಿಕಾರ ವಹಿಸಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ 1ನೇ ವಾರ್ಡ್ ಸದಸ್ಯ ವಿ.ಎಲ್. ಬಾಬು, 16ನೇ ವಾರ್ಡ್ ಸದಸ್ಯ ಎಸ್.ಎಂ. ನಾಗರಾಜ್, 8ನೇ ವಾರ್ಡ್ ಸದಸ್ಯ ಕೆ.ವಿ. ಸುದರ್ಶನ್ ರೆಡ್ಡಿ, 20ನೇ ವಾರ್ಡ್ ಸದಸ್ಯ ಎನ್.ರಾಮಾಂಜನೇಯಲು ಪೈಪೋಟಿ ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ನಲ್ಲಿ 6ನೇ ವಾರ್ಡ್ ಸದಸ್ಯ ಭಟ್ಟ ಪ್ರಸಾದ್, 4ನೇ ವಾರ್ಡ್ ಸದಸ್ಯ ಚಾಂದ್ ಬಾಷಾ ಆಕಾಂಕ್ಷಿಗಳಾಗಿದ್ದಾರೆಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

ಶೀಘ್ರದಲ್ಲಿ ಚುನಾವಣಾ ದಿನಾಂಕ ನಿಗದಿಯಾಗಲಿದೆ.

ಎರಡು ಪಕ್ಷಗಳ ಮಧ್ಯೆ ಬಾರಿ ಜಿದ್ದಾಜಿದ್ದಿ ಸೃಷ್ಟಿಯಾಗಿದ್ದು, ಚುನಾವಣಾ ಕಣದಲ್ಲಿ ಯಾವ ಪಕ್ಷ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.