23ನೇ ಅವಧಿಗೆ ಹೊಸದಾಗಿ ಚುನಾವಣೆ ನಡೆಸುವ ಕುರಿತಂತೆ ಪಾಲಿಕೆ ಆಯುಕ್ತರು ಜೂ. 10ರಂದು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಪ್ರಾದೇಶಿಕ ಆಯುಕ್ತರು ದಿನಾಂಕ ನಿಗದಿಪಡಿಸಿ ಪ್ರಕಟಿಸಿದ್ದಾರೆ.

ಹುಬ್ಬಳ್ಳಿ:

ಹು-ಧಾ ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಮೇಯರ್, ಉಪ ಮೇಯ‌ರ್ ಚುನಾವಣೆ ಜೂ. 29ಕ್ಕೆ ದಿನ ನಿಗದಿಯಾಗಿದೆ. ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಚುನಾವಣಾ ದಿನಾಂಕವನ್ನು ಜೂ. 19ರಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಹಾಲಿ ಮೇಯ‌ರ್ ವೀಣಾ ಬರದ್ವಾಡ ಹಾಗೂ ಉಪ ಮೇಯ‌ರ್ ಸತೀಶ ಹಾನಗಲ್ ಅವರ ಒಂದು ವರ್ಷದ ಅವಧಿ ಜೂ. 19ರಂದು ಪೂರ್ಣಗೊಂಡಿದೆ. 23ನೇ ಅವಧಿಗೆ ಹೊಸದಾಗಿ ಚುನಾವಣೆ ನಡೆಸುವ ಕುರಿತಂತೆ ಪಾಲಿಕೆ ಆಯುಕ್ತರು ಜೂ. 10ರಂದು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಪ್ರಾದೇಶಿಕ ಆಯುಕ್ತರು ದಿನಾಂಕ ನಿಗದಿಪಡಿಸಿ ಪ್ರಕಟಿಸಿದ್ದಾರೆ. ಅಲ್ಲದೇ, ಚುನಾವಣೆ ಕುರಿತಾಗಿ ಮತದಾರರಿಗೆ ತಿಳಿವಳಿಕೆ ನೋಟಿಸ್‌ ಕೂಡ ಜಾರಿ ಮಾಡಿದ್ದಾರೆ.

ಮೇಯ‌ರ್ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯ‌ರ್ ಸ್ಥಾನ ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳೆಗೆ ಮೀಸಲಾಗಿದೆ. 82 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 39, ಕಾಂಗ್ರೆಸ್‌ನ 33, ಎಐಎಂಐಎಂನ ಮೂವರು, ಜೆಡಿಎಸ್‌ನ ಒಬ್ಬರು ಹಾಗೂ 6 ಜನ ಪಕ್ಷೇತರ ಸದಸ್ಯರು ಇದ್ದಾರೆ.

ಮೇಯ‌ರ್, ಉಪ ಮೇಯ‌ರ್ ಚುನಾವಣೆಯಲ್ಲಿ ಸಂಸದರು, ಶಾಸಕರು ಹಾಗೂ ವಿಪ ಸದಸ್ಯರು ಮತದಾನದ ಅಧಿಕಾರ ಹೊಂದಿದ್ದಾರೆ. ಕಳೆದ ಬಾರಿ ಧಾರವಾಡದಲ್ಲಿ ಮೇಯ‌ರ್, ಉಪ ಮೇಯ‌ರ್ ಚುನಾವಣೆ ನಡೆದಿತ್ತು. ಈ ಬಾರಿ ಹುಬ್ಬಳ್ಳಿಯಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಇದೆ.