ಚುನಾವಣೆ ಮೀಸಲಾತಿ ಯಾವುದೇ ಇರಲಿ : 35 ವಾರ್ಡ್‌ನಲ್ಲೂ ‘ರಾಷ್ಟ್ರಭಕ್ತ ಬಳಗ’ ಕಣಕ್ಕೆ

| Published : Aug 17 2024, 12:56 AM IST / Updated: Aug 17 2024, 12:41 PM IST

ಚುನಾವಣೆ ಮೀಸಲಾತಿ ಯಾವುದೇ ಇರಲಿ : 35 ವಾರ್ಡ್‌ನಲ್ಲೂ ‘ರಾಷ್ಟ್ರಭಕ್ತ ಬಳಗ’ ಕಣಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆ ಚುನಾವಣೆಯಲ್ಲಿ ಮೀಸಲಾತಿ ಯಾವುದೇ ಇರಲಿ, ಮೀಸಲಾತಿಗೆ ತಕ್ಕಂತೆ ರಾಷ್ಟ್ರ ಭಕ್ತರ ಬಳಗದಿಂದ ಎಲ್ಲ ವಾರ್ಡ್ ಗಳಲ್ಲಿಯೂ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

 ಶಿವಮೊಗ್ಗ :  ಮುಂಬರುವ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ 35 ವಾರ್ಡ್‌ಗಳಲ್ಲೂ ರಾಷ್ಟ್ರಭಕ್ತ ಬಳಗದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೀಸಲಾತಿ ಯಾವುದೇ ಇರಲಿ, ಮೀಸಲಾತಿಗೆ ತಕ್ಕಂತೆ ರಾಷ್ಟ್ರ ಭಕ್ತರ ಬಳಗದಿಂದ ಎಲ್ಲ ವಾರ್ಡ್ ಗಳಲ್ಲಿಯೂ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ಜನರ ಬಳಿ ಇದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವವರನ್ನೇ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಿಂದುತ್ವಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ರಾಷ್ಟ್ರಭಕ್ತ ಮುಸ್ಲಿಮರು, ಕ್ರೈಸ್ತರು ನಮ್ಮ ಜೊತೆ ಬಂದರೆ ಅವರಿಗೂ ಒಂದು ಅವಕಾಶ ನೀಡಲಾಗುವುದು. ಮುಸ್ಲಿಂ, ಕ್ರೈಸ್ತರಾಗಲಿ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಿಸಬೇಕು. ಈಗಾಗಲೇ ಸುಪ್ರೀಂ ಕೋರ್ಟ್ ಶಿವಮೊಗ್ಗ ಸೇರಿದಂತೆ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಬೇಕು ಎಂದು ಆದೇಶ ನೀಡಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗವೂ ಕೂಡ ಇನ್ನು 8 ದಿನದಲ್ಲಿ ನೋಟಿಫಿಕೇಷನ್ ಹೊರಡಿಸುವುದಾಗಿ ತಿಳಿಸಿದೆ. ಆದರೆ, ಮೀಸಲಾತಿ ಮತ್ತು ವಾರ್ಡ್‌ಗಳ ಹೆಚ್ಚಳ ಸೇರಿ ದಂತೆ ಇತರ ವಿಷಯಗಳಿಗಾಗಿ ಚುನಾವಣೆಯನ್ನು ಮುಂದೂಡಬಾರದು. ತಕ್ಷಣವೇ ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಚಿಹ್ನೆಯ ಗೊಂದಲ ಉಂಟಾಗಬಹುದು. ಚುನಾವಣಾ ಆಯೋಗಕ್ಕೆ ಒಂದೇ ಚಿಹ್ನೆ ಕೊಡುವಂತೆ ಮನವಿ ಮಾಡು ತ್ತೇವೆ. ಕೊಡಲು ಆಗದಿದ್ದರೆ ಆಯಾ ಅಭ್ಯರ್ಥಿಗಳು ತಮಗೆ ಸಿಕ್ಕ ಚಿಹ್ನೆ ಅಡಿಯಲ್ಲಿಯೇ ಚುನಾವಣೆ ಎದುರಿಸುತ್ತಾರೆ. ಲೋಕಸಭೆ ಚುನಾವಣೆ ಬೇರೆ, ಸ್ಥಳೀಯ ಚುನಾವಣೆಗಳು ಬೇರೆ. ಇಲ್ಲಿ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿ ನಮ್ಮ ಸಂಘಟನೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳಿದರು.

ಈಗಾಗಲೇ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲೂ ಸಮಸ್ಯೆಗಳ ಆಗರವೇ ಇದೆ. ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಚುನಾವಣೆ ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಮಹಾನಗರ ಪಾಲಿಕೆ ಸೇರಿದಂತೆ ಜಿಪಂ, ತಾಪಂಗೂ ಚುನಾವಣೆ ನಡೆಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗನ್ನಿ ಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ್, ಮೋಹನ್ ಜಾಧವ್, ಶ್ರೀಕಾಂತ್, ಶಿವಾಜಿ, ಇ. ವಿಶ್ವಾಸ್, ಚಿದಾನಂದ್ ಮೊದಲಾವರಿದ್ದರು.ಶಿಮುಲ್‌ ಸೋಲು ದೇವರ ಶಿಕ್ಷೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ತಮ್ಮ ಪುತ್ರ ಕೆ.ಇ. ಕಾಂತೇಶ್ ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡುತ್ತೇವೆ ಎಂದು ಈಗಾಗಲೇ ನಂಬಿಸಿ ಮೋಸ ಮಾಡಿದ್ದಾರೆ. ಮೋದಿ ಹೆಸರು ಹೇಳಿ ಗೆದ್ದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗದ ಡಿಸಿಸಿ ಬ್ಯಾಂಕ್, ಶಿಮುಲ್ ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಆಗಲಿಲ್ಲ. ಮೋಸ ಮಾಡಿದವರಿಗೆ ಒಂದಲ್ಲ ಒಂದು ದಿನ ದೇವರೇ ತಕ್ಕ ಶಿಕ್ಷೆ ಕೊಡುತ್ತಾನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.