ಧಾರವಾಡ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ಗೆ ಬರ!

| Published : Oct 11 2023, 12:46 AM IST

ಧಾರವಾಡ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ಗೆ ಬರ!
Share this Article
  • FB
  • TW
  • Linkdin
  • Email

ಸಾರಾಂಶ

ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಮಳೆ ಕೊರತೆ ಒಂದೆಡೆ ರೈತರನ್ನು ಕಂಗಾಲು ಮಾಡಿದರೆ, ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನಿರ್ದಿಷ್ಟಾವಧಿ ವಿದ್ಯುತ್‌ ಕಡಿತ ಮಾಡುತ್ತಿರುವುದು ಇನ್ನೊಂದೆಡೆ ಚಿಂತೆಗೆ ಕಾರಣವಾಗಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಮುಂಗಾರು ಹಂಗಾಮಿನ ಸಮಯದಲ್ಲಿ ಮಳೆ ಕೊರತೆಯಿಂದ ಬೆಳೆಹಾನಿಯಾಗಿದ್ದು, ಧಾರವಾಡ ಜಿಲ್ಲಾದ್ಯಂತ ಬರ ಘೋಷಣೆಯಾಗಿದೆ. ಇದೀಗ ಹಿಂಗಾರು ಹಂಗಾಮಿನ ಮೇಲೆ ಭರವಸೆ ಇಟ್ಟಿರುವ ರೈತರಿಗೆ ಮತ್ತೆ ಮಳೆ ಕೊರತೆಯು ಗಾಯದ ಮೇಲೆ ಬರೆ ಎಳೆದಂತ ಸ್ಥಿತಿ ತಂದಿಟ್ಟಿದೆ.

ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಮಳೆ ಕೊರತೆ ಒಂದೆಡೆ ರೈತರನ್ನು ಕಂಗಾಲು ಮಾಡಿದರೆ, ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನಿರ್ದಿಷ್ಟಾವಧಿ ವಿದ್ಯುತ್‌ ಕಡಿತ ಮಾಡುತ್ತಿರುವುದು ಇನ್ನೊಂದೆಡೆ ಚಿಂತೆಗೆ ಕಾರಣವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಹಿಂಗಾರಿಗೆ ಕೃಷಿ ಇಲಾಖೆ 2.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಈ ಪೈಕಿ ಶೇ. 15ರಷ್ಟು ಕಡಲೆ, ಕುಸುಬೆ, ಹತ್ತಿಯಂತಹ ಬೆಳೆಗಳನ್ನು ಬಿತ್ತಲಾಗಿದೆ. ಇನ್ನೇನು ಮಳೆ ಬಂದೀತು ಎಂದು ನಿರೀಕ್ಷೆ ಇಟ್ಟಿದ್ದ ರೈತರಿಗೆ ಬಿಸಿಲಿನ ಬೇಗೆ ಹೆಚ್ಚಾಗಿದೆ. ಆರಂಭದಲ್ಲಿ ಕಸುವಿನಿಂದ ಮೇಲೇಳಬೇಕಿದ್ದ ಬೆಳೆಗಳು ಭೂಮಿಯಿಂದ ಮೇಲೇಳುತ್ತಿಲ್ಲ. ಹೀಗಾಗಿ, ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಬೋರ್‌ವೆಲ್‌ ಹಾಗೂ ಹಳ್ಳಗಳ ನೀರು ಬಳಸಿ ಅವುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಾಗೆಯೇ, ಬಿತ್ತನೆ ಮಾಡಬೇಕೆಂದಿರುವ ಇನ್ನುಳಿದ ರೈತರು ಸಹ ಮಳೆಗಾಗಿ ಹಾತೊರೆಯುತ್ತಿದ್ದಾರೆ.

ಶೇ. 50ರಷ್ಟು ವಿದ್ಯುತ್‌ ಕಡಿತ..

ಬೇಸರದ ಸಂಗತಿ ಏನೆಂದರೆ, ಬೋರ್‌ವೆಲ್‌ಗೆ ಬೇಕಾದ ತ್ರಿಫೇಸ್‌ ವಿದ್ಯುತ್‌ನಲ್ಲಿ ಕಡಿತ ಮಾಡಲಾಗಿದೆ. ಈ ಮೊದಲು ನಿತ್ಯ ಏಳು ಗಂಟೆ ತ್ರೀಫೇಸ್‌ ನೀಡುತ್ತಿದ್ದ ಹೆಸ್ಕಾಂ ಈಗ ಮೂರು ಗಂಟೆಗೆ ಶೇ. 50ರಷ್ಟು ಮಾತ್ರ ವಿದ್ಯುತ್‌ ನೀಡುತ್ತಿದೆ. ಅಲ್ಲದೇ, ನಿತ್ಯ ಸಂಜೆ 6ರಿಂದ 7.30ರ ವರೆಗೆ ಒಂದೂವರೆ ಗಂಟೆ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿದೆ. ಮಧ್ಯಾಹ್ನ ಹೊತ್ತು ಏಕಾಏಕಿ ವಿದ್ಯುತ್‌ ಹೋಗುತ್ತಿದ್ದು, ಗ್ರಾಮೀಣ ಜನತೆ ಹೈರಾಣಾಗಿದ್ದಾರೆ. ಹೆಸ್ಕಾಂ ನಡೆಯನ್ನು ಖಂಡಿಸಿ ಮಂಗಳವಾರ ತಾಲೂಕಿನ ನರೇಂದ್ರ ಗ್ರಾಮಸ್ಥರು ಕೃಷಿ ವಿವಿ ಬಳಿ ಇರುವ ವಿದ್ಯುತ್‌ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿರುವುದನ್ನು ವಿದ್ಯುತ್‌ ಅಗತ್ಯತೆಯನ್ನು ತೋರಿಸುತ್ತಿದೆ. ಈಗಾಗಲೇ ರೈತರಿಗೆ ಮುಂಗಾರು ಕೈಕೊಟ್ಟಿದೆ. ಇದುವರೆಗೂ ಹಿಂಗಾರು ಮಳೆಯೂ ಆಗುತ್ತಿಲ್ಲ. ಇದರಿಂದಾಗಿ ರೈತರು ಕೊಳವೆ ಬಾವಿ ಮೂಲಕವಾದರೂ ಕೃಷಿ ಚಟುವಟಿಕೆ ಮಾಡೋಣ ಎಂದರೆ ಅದಕ್ಕೂ ವಿದ್ಯುತ್‌ ಶಾಕ್‌ ನೀಡಲಾಗುತ್ತಿದೆ. ಸರಿಯಾದ ಸಮಯಕ್ಕೆ ವಿದ್ಯುತ್ ಸಿಗದೇ ನೀರು ಹಾಯಿಸಲು ಸಾಧ್ಯವಾಗದೇ ಬೆಳೆಗಳು ಒಣಗುತ್ತಿವೆ. ಹೆಸ್ಕಾಂ ಏನಾದರೂ ಮಾಡಿ ವಿದ್ಯುತ್‌ ಕೊಡುವ ಪ್ರಯತ್ನ ಮಾಡಲಿ ಎನ್ನುವುದು ರೈತ ವಿಠ್ಠಲ ದಿಂಡಲಕೊಪ್ಪ ಅವರ ಆಗ್ರಹ.

ವಿದ್ಯುತ್‌ ಉತ್ಪಾದನೆಯಲ್ಲಿ ಕುಂಠಿತ

ಮಳೆ ಹಾಗೂ ಇತರೆ ನೈಸರ್ಗಿಕ ಸಂಪನ್ಮೂಲದ ಕೊರತೆಯಿಂದ ವಿದ್ಯುತ್‌ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಹೀಗಾಗಿ ಕೆಲವು ದಿನಗಳಿಂದ ಎಲ್ಲೆಡೆ ವಿದ್ಯುತ್‌ ವಿತರಣೆಯಲ್ಲಿ ಅಡಚಣೆಯಾಗುತ್ತಿದೆ. ಮೇಲಧಿಕಾರಿಗಳ ಆದೇಶದಂತೆ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿದೆ. ಹೀಗಾಗಿ, ಛತ್ತೀಸಗಡ್‌ದಿಂದ ಹೆಸ್ಕಾಂ ವಿದ್ಯುತ್‌ ಖರೀದಿ ಮಾಡುವ ಯೋಚನೆ ಮಾಡಿದ್ದು ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ ಹೆಸ್ಕಾಂ ಗ್ರಾಮೀಣ ವಿಭಾಗದ ಸಹಾಯಕ ಎಂಜಿನಿಯರ್‌ ಗುಲ್ಜಾರ್‌ ಎ.ಎಂ.