ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ಮಂಚಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿಗೆ ಕಾಡಾನೆಯೊಂದು ದಾಳಿ ನಡೆಸಿದ್ದು, ೧೦ಕ್ಕೂ ಹೆಚ್ಚು ತೆಂಗಿನ ಸಸಿ ಹಾಗೂ ಟೊಮ್ಯಾಟೋ ಮತ್ತು ಸೋಲಾರ್ ತಂತಿ ಮುರಿದು ಹಾಕಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ಮಂಚಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿಗೆ ಕಾಡಾನೆಯೊಂದು ದಾಳಿ ನಡೆಸಿದ್ದು, ೧೦ಕ್ಕೂ ಹೆಚ್ಚು ತೆಂಗಿನ ಸಸಿ ಹಾಗೂ ಟೊಮ್ಯಾಟೋ ಮತ್ತು ಸೋಲಾರ್ ತಂತಿ ಮುರಿದು ಹಾಕಿದ ಘಟನೆ ಭಾನುವಾರ ರಾತ್ರಿ ನಡೆದಿದೆ.ಗ್ರಾಮದ ರೈತ ಮಹದೇವೇಗೌಡರಿಗೆ ಸೇರಿದ ಜಮೀನಿನಲ್ಲಿ 4 ವರ್ಷದ ತನಕ ಬೆಳೆದು ಪೋಷಿಸಿದ್ದ ತೆಂಗಿನ ಸಸಿಗಳನ್ನು ಆನೆ ಮುರಿದು ಹಾಕಿದೆ.
ಅಲ್ಲದೇ ಟೊಮ್ಯಾಟೋ ಫಸಲನ್ನು ಸಹ ಆನೆ ಕೆಡವಿದೆ. ಸೋಲಾರ್ ತಂತಿ ಬೇಲಿಯನ್ನು ಕಿತ್ತು ಬೀಸಾಕಿದೆ ಎಂದು ರೈತ ಬೆಟ್ಟೇಗೌಡ ತಿಳಿಸಿದ್ದಾರೆ.ಕಾಡಾನೆ ದಾಳಿಗೆ ಒಳಗಾದ ವಿಷಯ ತಿಳಿದ ಓಂಕಾರ ವಲಯದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಹಜರು ನಡೆಸಿದ್ದು, ಇಲಾಖೆಯಿಂದ ಬರುವ ಪರಿಹಾರ ಸಿಗುತ್ತದೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ.
ಓಂಕಾರ ವಲಯದ ಕಾಡಾನೆಯೊಂದು ಮಂಚಹಳ್ಳಿ ಸುತ್ತ ಮುತ್ತ ದಾಂಧಲೆ ನಡೆಸುತ್ತಿದೆ. ಈ ಆನೆಯನ್ನು ಹಿಡಿದು ಬೇರೆಡೆಗೆ ಬಿಡುವುದು ಒಳಿತು ಎಂದು ರೈತಸಂಘದ ಬೆಟ್ಟೆಗೌಡ ಸಲಹೆ ನೀಡಿದ್ದಾರೆ.