ಸಾರಾಂಶ
ಗೋಣಿಕೊಪ್ಪ: ವಿದ್ಯುತ್ ಸ್ಪರ್ಶಿಸಿ ಹತ್ತು ವರ್ಷ ಪ್ರಾಯದ ಗಂಡು ಕಾಡಾನೆ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಅರ‍್ವತೋಕ್ಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಆನೆ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ತಿತಿಮತಿ ಎಸಿಎಫ್ ಗೋಪಾಲ್, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳ ತಂಡ ಹಾಗೂ ವೈದ್ಯಾಧಿಕಾರಿ ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡು, ಅಂತಿಮ ಸಂಸ್ಕಾರ ನೆರವೇರಿಸಿದರು.
ಅರ‍್ವತೋಕ್ಲು ಗ್ರಾಮದ ಈಶ್ವರ ರಾವ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಈ ಘಟನೆ ನಡೆದಿದ್ದು, 11 ಕೆ.ವಿ. ವಿದ್ಯುತ್ ಮಾರ್ಗದ ತಂತಿ ತುಂಡಾಗಿ ವಿದ್ಯುತ್ ಕಂಬದ ಮೂಲಕ ಆನೆ ಕೊಂಬಿಗೆ ತಗುಲಿ ಈ ದುರಂತ ಸಂಭವಿಸಿದೆ.
ದಕ್ಷಿಣ ಕೂಡಗಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ವಿದ್ಯುತ್ ತಗುಲಿ 12ಕ್ಕೂ ಹೆಚ್ಚು ಆನೆಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ. ಪೊನ್ನಂಪೇಟೆ ವಿಭಾಗದಲ್ಲೇ ನಾಲ್ಕು ಆನೆಗಳು ಮೃತಪಟ್ಟಿವೆ.
ಚೆಸ್ಕಾಂ ಇಲಾಖೆಯ ನಿಯಮದಂತೆ ಎಲ್ಲ ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಸಿಮೆಂಟ್ ಕಂಬವನ್ನು ಅಳವಡಿಸುವಂತೆ ಕಳೆದ ನಾಲ್ಕು ವರ್ಷಗಳ ಹಿಂದೆ ಆದೇಶ ಹೊರಡಿಸಿದ್ದರೂ ಕೊಡಗು ಜಿಲ್ಲೆಯಲ್ಲಿ ಚೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಬ್ಬಿಣದ ಕಂಬಗಳು ಕೆಲವು ಕಡೆಗಳಲ್ಲಿ ಹಾಗೆಯೇ ಇದ್ದು ದುರಂತಕ್ಕೆ ಆಹ್ವಾನ ನೀಡುತ್ತಿದೆ.
ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ವನ್ಯ ಪ್ರಾಣಿಗಳು ಸೇರಿದಂತೆ, ಮಾನವರು ಕೂಡ ಬಲಿಯಾಗುವ ಸಂಭವವಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.