ಗಾಂಧೀಜಿ ಸ್ಮರಣೆಯೊಂದಿಗೆ ಅವರ ಸಂಸ್ಕಾರ ಅಳವಡಿಸಿಕೊಳ್ಳಿ

| Published : Sep 08 2025, 01:01 AM IST

ಸಾರಾಂಶ

ಗಾಂಧೀಜಿ ತಾವು ಪ್ರಯೋಗಿಸಿ, ಕಂಡುಕೊಂಡ ಸತ್ಯವನ್ನು ಇತರರಿಗೆ ತಿಳಿಸಿದರು. ಸತ್ಯ, ಅಹಿಂಸೆಯ ಪರಿಕಲ್ಪನೆಯ ಜತೆಗೆ ಅಹಿಂಸಾತ್ಮಕ ಬದಕನ್ನು ಕಲಿಸಿದರು. ವಿದ್ಯಾರ್ಥಿಗಳಲ್ಲಿ ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗಾಂಧಿ ಚಿತ್ರಣವನ್ನು ಎಲ್ಲರ ಮನದಲ್ಲಿ ಕಟ್ಟಿಕೊಡುವುದು ಈ ಪ್ರಬಂಧ ಸ್ಪರ್ಧೆಯ ಉದ್ದೇಶ.

ಧಾರವಾಡ: ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ನುಡಿದಂತೆ ನಡೆದರು. ನಡೆದಂತೆ ನುಡಿದರು. ಅವರ ಸ್ಮರಣೆಯೊಂದಿಗೆ ಅವರ ಜೀವನ ಸಂದೇಶ, ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಪಂ ಸಿಇಓ ಭುವನೇಶ ಪಾಟೀಲ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತವು ವಾರ್ತಾ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಉದ್ಘಾಟಿಸಿದ ಅವರು, ತಾಲೂಕು ಹಂತದಲ್ಲಿ ಪ್ರಬಂಧ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಮಾತನಾಡಿದರು.

ಗಾಂಧೀಜಿ ತಾವು ಪ್ರಯೋಗಿಸಿ, ಕಂಡುಕೊಂಡ ಸತ್ಯವನ್ನು ಇತರರಿಗೆ ತಿಳಿಸಿದರು. ಸತ್ಯ, ಅಹಿಂಸೆಯ ಪರಿಕಲ್ಪನೆಯ ಜತೆಗೆ ಅಹಿಂಸಾತ್ಮಕ ಬದಕನ್ನು ಕಲಿಸಿದರು. ವಿದ್ಯಾರ್ಥಿಗಳಲ್ಲಿ ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗಾಂಧಿ ಚಿತ್ರಣವನ್ನು ಎಲ್ಲರ ಮನದಲ್ಲಿ ಕಟ್ಟಿಕೊಡುವುದು ಈ ಪ್ರಬಂಧ ಸ್ಪರ್ಧೆಯ ಉದ್ದೇಶ. ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಗಾಂಧೀಜಿಯವರ ಜೀವನದ ಬಗ್ಗೆ ಬರೆಯುವುದು ಅಷ್ಟೊಂದು ಸುಲಭವಲ್ಲ. ಅವರು ಜೀವನದಲ್ಲಿ ನಡೆದು ಬಂದ ದಾರಿಯೂ ಕಷ್ಟಕರವಾಗಿತ್ತು. ಅವರ ತ್ಯಾಗಮಯಿ ಬದುಕು ಮಾದರಿಯಾಗಿತ್ತು ಎಂದರು.

ಕವಿವಿ ಗಾಂಧಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಶಿವಾನಂದ ಶೆಟ್ಟರ, ಅದರಗುಂಚಿ ಶಂಕರಗೌಡರ ಸಹೋದರ, ಏಕೀಕರಣದ ಹೋರಾಟಗಾರ ವಿರೂಪಾಕ್ಷಗೌಡ ಪಾಟೀಲ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಿ.ಸಿ. ಹಿರೇಮಠ, ಡಾ. ತಟಗಾರ ಇದ್ದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಸ್ವಾಗತಿಸಿದರು. ಡಾ. ಸರಸ್ವತಿದೇವಿ ಭಗವತಿ ನಿರೂಪಿಸಿದರು. ಶ್ರೀಧರ ಹೆಗಡೆ ಭದ್ರನ್ ವಂದಿಸಿದರು.

ವಿವಿಧ ತಾಲೂಕುಗಳಿಂದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಆಯಾ ಶಾಲಾ ಕಾಲೇಜುಗಳ ಶಿಕ್ಷಕರು, ಸರ್ಕಾರಿ ಪ್ರಥಮ ದರ್ಜೆ ಪ್ರಾಧ್ಯಾಪಕರಿದ್ದರು.