ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾರ್ಥಕತೆ ಕಂಡ ರಾಜರ್ಷಿ ನಾಲ್ವಡಿ ಅವರ ಜೀವನದ ಆದರ್ಶಗಳನ್ನು ಯುವಜನರು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ತಿಲಕ್‌ರಾಜ್ ಕರೆ ನೀಡಿದರು.ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ನಾಲ್ವಡಿ ಅವರು ತಮ್ಮ ಆಡಳಿತದಲ್ಲಿ ಸಾಮಾಜಿಕ ಅಸಮಾನತೆ ಹಾಗೂ ಮೌಢ್ಯಗಳ ವಿರುದ್ಧ ಹೋರಾಟ ನಡೆಸಿ ಸಮ ಸಮಾಜದ ನಿರ್ಮಾಣಕ್ಕೆ ದುಡಿದು, ಪ್ರಜೆಗಳ ಕ್ಷೇಮಕ್ಕೆ ಶ್ರಮಿಸಿದ್ದರು ಎಂದರು.ರೈತರ ಬೇಸಾಯಕ್ಕೆ ಅನುಕೂಲವಾಗುವಂತೆ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣಕ್ಕೆ ಹಣಕಾಸಿನ ತೊಂದರೆ ಎದುರಾದಾಗ ಅರಮನೆಯಲ್ಲಿದ್ದ ಚಿನ್ನ, ಮುತ್ತು ರತ್ನ, ವಜ್ರ ವೈಡೂರ್ಯಗಳ ಆಭರಣಗಳನ್ನು ಮುಂಬೈ ಮಾರುಕಟ್ಟೆಯನ್ನು ಮಾರಾಟ ಮಾಡಿ ತಂದ ಹಣದಿಂದ ಅಣೆಕಟ್ಟೆ ಕಾಮಗಾರಿಯನ್ನು ಸಂಪೂರ್ಣಗೊಳಿಸಿದರು ಎಂದರು.
ರೈತರು ಹಾಗೂ ಶ್ರೀಸಾಮಾನ್ಯರ ಅನುಕೂಲಕ್ಕಾಗಿ ಕನ್ನಂಬಾಡಿ ಆಣೆಕಟ್ಟೆಯನ್ನು ನಿರ್ಮಿಸಿಕೊಟ್ಟು ಬರಡಾಗಿದ್ದ ಮಂಡ್ಯ ಜಿಲ್ಲೆಯನ್ನು ಬಂಗಾರ ಬೆಳೆಯುವ ಜಿಲ್ಲೆಯನ್ನಾಗಿದ ನಾಲ್ವಡಿ ಅವರು ಇತಿಹಾಸದ ಪುಟಗಳಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ ಎಂದು ಗುಣಗಾನ ಮಾಡಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಉಪನ್ಯಾಸಕ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್, ಮಲ್ಲಿಕಾರ್ಜುನ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಶಿಕ್ಷಕರಾದ ಧರ್ಮಪ್ಪ, ಕನ್ನಡ ನಾಗರಾಜು ಇದ್ದರು.